ದೇಶ

ಭಯೋತ್ಪಾದನೆಗೆ ಸಂಚು ಪ್ರಕರಣ: ಎನ್‌ಐಎನಿಂದ ಕಾಶ್ಮೀರದಲ್ಲಿ ಜೆಇಎಂ ಉಗ್ರನ ಬಂಧನ

Lingaraj Badiger

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಚಲನವಲನದ ಬಗ್ಗೆ ರಹಸ್ಯ ಮಾಹಿತಿ ರವಾನಿಸುತ್ತಿದ್ದ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್(ಜೆಇಎಂ) ಭಯೋತ್ಪಾದಕ ಸಂಘಟನೆಯ ಉಗ್ರನನ್ನು ಬಂಧಿಸಲಾಗಿದೆ ಎಂದು ಎನ್ಐಎ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳ ಮೂಲಕ ಭಾರತವನ್ನು ಅಸ್ಥಿರಗೊಳಿಸಲು ಗಡಿಯಾಚೆಗಿನ ಭಯೋತ್ಪಾದಕ ಸಂಘಟನೆಗಳು ನಡೆಸುತ್ತಿರುವ ಸಂಚಿನ ವಿರುದ್ಧದ ಹೋರಾಟದ ನಡುವೆ ಉತ್ತರ ಕಾಶ್ಮೀರದ ಕುಪ್ವಾರದಲ್ಲಿ ಉಗ್ರ ಮೊಹಮ್ಮದ್ ಉಬೈದ್ ಮಲಿಕ್ ನನ್ನು ಬಂಧಿಸಲಾಗಿದೆ ಎಂದು ಎನ್ಐಎ ವಕ್ತಾರರು ಹೇಳಿದ್ದಾರೆ.

ಭಯೋತ್ಪಾದನೆಗೆ ಸಂಚು ರೂಪಿಸುತ್ತಿದ್ದ ಮಲಿಕ್, ಪಾಕಿಸ್ತಾನ ಮೂಲದ ಜೆಇಎಂ ಕಮಾಂಡರ್ ಜತೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಅವರು ತಿಳಿಸಿದ್ದಾರೆ.

ಬಂಧಿತ ಉಗ್ರ, ಪಾಕಿಸ್ತಾನ ಮೂಲದ ಕಮಾಂಡರ್‌ಗೆ ವಿಶೇಷವಾಗಿ ಸೈನಿಕರು ಮತ್ತು ಭದ್ರತಾ ಪಡೆಗಳ ಚಲನವಲನದ ಬಗ್ಗೆ ರಹಸ್ಯ ಮಾಹಿತಿ ರವಾನಿಸುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ವಕ್ತಾರರು ಹೇಳಿದ್ದಾರೆ.

SCROLL FOR NEXT