ದೇಶ

ರಾಜತಾಂತ್ರಿಕ ಬಿಕ್ಕಟ್ಟು ನಡುವಲ್ಲೇ ಕೆನಡಾ ಪ್ರಜೆಗಳಿಗೆ ಇ-ವೀಸಾ ಸೇವೆ ಪುನರಾರಂಭಿಸಿದ ಭಾರತ

Manjula VN

ನವದೆಹಲಿ: ಎರಡು ದೇಶಗಳ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟ 2 ತಿಂಗಳ ಬಳಿಕ ಕೇಂದ್ರ ಸರ್ಕಾರ ಕೆನಡಾ ಪ್ರಜೆಗಳಿಗೆ ಇ-ವೀಸಾ ಸೇವೆಗಳನ್ನು ಪುನರಾರಂಭಿಸಿದೆ.

ಎರಡು ತಿಂಗಳ ಹಿಂದೆ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಬಗ್ಗೆ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಭಾರತದ ಮೇಲೆ ಆರೋಪ ಮಾಡಿದ ನಂತರ ಎರಡು ದೇಶಗಳ ರಾಜತಾಂತ್ರಿಕ ಸಂಬಂಧ ಹದಗೆಟ್ಟಿತ್ತು. ಉಭಯ ದೇಶಗಳಿಂದ ರಾಯಭಾರಿಗಳು ಹಾಗೂ ಸಿಬ್ಬಂದಿಗಳನ್ನು ವಾಪಸ್‌ ಕರೆಸಿಕೊಳ್ಳಲಾಗಿತ್ತು.

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸೆಪ್ಟೆಂಬರ್ 18ರಂದು, ‘ಕೆನಡಾದ ಭದ್ರತಾ ಏಜೆನ್ಸಿಗಳು ಭಾರತೀಯ ಸರ್ಕಾರಿ ಏಜೆಂಟರು ಮತ್ತು ನಿಜ್ಜರ್ ಸಾವಿನ ನಡುವಿನ ಸಂಬಂಧವನ್ನು ತನಿಖೆ ನಡೆಸುತ್ತಿವೆ’ ಎಂದು ಹೇಳಿದ್ದರು. ಅಲ್ಲದೆ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ ಕೈವಾಡವಿದೆ ಎಂದು ಆರೋಪಿಸಿದ್ದರು.

ಟ್ರುಡೊ ಹೇಳಿಕೆಯ ನಂತರ, ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಪ್ರಾರಂಭವಾಯಿತು. ಭಾರತದ ಸೂಚನೆಗಳನ್ನು ಅನುಸರಿಸಿ, ಕೆನಡಾವು 41 ಕೆನಡಾದ ರಾಜತಾಂತ್ರಿಕರನ್ನು ನವದೆಹಲಿಯಿಂದ ತಮ್ಮ ದೇಶಕ್ಕೆ ಕರೆಸಿಕೊಂಡಿತ್ತು.

ಜಸ್ಟಿನ್ ಟ್ರುಡೊ ಆರೋಪವನ್ನು ನಿರಾಕರಿಸಿದ್ದ ವಿದೇಶಾಂಗ ಇಲಾಖೆಯ ಅಧಿಕಾರಿಗಳು, ಖಲಿಸ್ತಾನಿ ಭಯೋತ್ಪಾದಕನ ಹತ್ಯೆಯಲ್ಲಿ ಭಾರತೀಯ ಏಜೆಂಟ್‌ಗಳು ಭಾಗಿಯಾಗಿಲ್ಲ. ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದ್ದರೂ, ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸಲು ಮತ್ತು ವ್ಯಾಪಾರ ಒಪ್ಪಂದವನ್ನು ಮಾತುಕತೆ ನಡೆಸಲು ಕೆನಡಾದೊಂದಿಗೆ ಭಾರತವು ಚರ್ಚೆಗೆ ಮರಳಲು ಬಯಸುತ್ತದೆ ಎಂದು ತಿಳಿಸಿದ್ದರು.

SCROLL FOR NEXT