ದೇಶ

ಸುರಂಗ ಕುಸಿತದ ಸ್ಥಳಕ್ಕೆ ಪ್ರಧಾನಿ ಮೋದಿ ಕಚೇರಿಯ ನಿಯೋಗ ಭೇಟಿ, ಪರಿಶೀಲನೆ

Lingaraj Badiger

ಉತ್ತರಕಾಶಿ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಕುಮಾರ್ ಮಿಶ್ರಾ ನೇತೃತ್ವದ ನಿಯೋಗ ಸೋಮವಾರ ಉತ್ತರಖಂಡದ ಉತ್ತರಕಾಶಿಯಲ್ಲಿರುವ ಸಿಲ್ಕ್ಯಾರಾ ಸುರಂಗ ಕುಸಿತದ ಸ್ಥಳಕ್ಕೆ ಭೇಟಿ ನೀಡಿ, ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದ್ದಾರೆ.

ಸುರಂಗ ಕುಸಿತದಿಂದ ಒಳಗಡೆ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಇಂದು 16ನೇ ದಿನಕ್ಕೆ ಕಾಲಿಟ್ಟಿದ್ದು, ಕಾರ್ಮಿಕರನ್ನು ರಕ್ಷಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ಮಿಶ್ರಾ ಅವರು ಪರಿಶೀಲಿಸಿದರು.

ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಮತ್ತು ಉತ್ತರಾಖಂಡ ಮುಖ್ಯ ಕಾರ್ಯದರ್ಶಿ ಎಸ್.ಎಸ್.ಸಂಧು ಅವರು ಪ್ರಮೋದ್ ಕುಮಾರ್ ಮಿಶ್ರಾ ಅವರೊಂದಿಗೆ ಸುರಂಗದ ಒಳಗಿನ ಕಾಮಗಾರಿಯನ್ನು ಪರಿಶೀಲಿಸಿದರು.

ಸುರಂಗದೊಳಗೆ ಸಿಲುಕಿರುವ ಕಾರ್ಮಿಕರಿಗೆ ಕಳುಹಿಸಿದ ಆಹಾರ ಪದಾರ್ಥಗಳ ಬಗ್ಗೆಯೂ ಪ್ರಧಾನ ಕಾರ್ಯದರ್ಶಿ ವಿಚಾರಿಸಿದರು. ಅಲ್ಲದೆ ಸಿಕ್ಕಿಬಿದ್ದ ಕಾರ್ಮಿಕರು ಮತ್ತು ಅವರ ಕುಟುಂಬಗಳೊಂದಿಗೆ ಮಿಶ್ರಾ ಅವರು ಮಾತನಾಡಿದರು.

ಆಗರ್ ಯಂತ್ರದ ಎಲ್ಲಾ ಅವಶೇಷಗಳನ್ನು ತೆಗೆದುಹಾಕಲಾಗಿದೆ ಮತ್ತು ಸಿಕ್ಕಿಬಿದ್ದ ಕಾರ್ಮಿಕರನ್ನು ತಲುಪಲು ಕೈಯಿಂದಲೇ ಕೊರೆಯುವಿಕೆಯ ಕೆಲಸ ಕೆಲವೇ ಗಂಟೆಗಳಲ್ಲಿ ಪ್ರಾರಂಭವಾಗಲಿದೆ ಎಂದು ಸೂಕ್ಷ್ಮ ಸುರಂಗ ತಜ್ಞ ಕ್ರಿಸ್ ಕೂಪರ್ ಇಂದು ಬೆಳಗ್ಗೆ ಹೇಳಿದ್ದಾರೆ.

ಪೈಪ್‌ನೊಳಗೆ ಸಿಲುಕಿದ್ದ ಸುರಂಗ ಕೊರೆಯಲು ಬಳಸುತ್ತಿದ್ದ ಆಗರ್ ಯಂತ್ರವನ್ನು ಸೋಮವಾರ ಬೆಳಗ್ಗೆ ಪ್ಲಾಸ್ಮಾ ಕಟ್ಟರ್ ಬಳಸಿ ಕತ್ತರಿಸಿ ತೆಗೆಯಲಾಗಿದೆ.

SCROLL FOR NEXT