ದೇಶ

ರಾಹುಲ್ ಗಾಂಧಿಗೆ ಬಿಆರ್‌ಎಸ್ ನಾಯಕಿ ಸವಾಲು; ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಎಂದ ಕೆ ಕವಿತಾ

Ramyashree GN

ಹೈದರಾಬಾದ್: ಕಾಂಗ್ರೆಸ್ ಆಡಳಿತವಿರುವ ಯಾವುದೇ ರಾಜ್ಯಗಳಲ್ಲಿ ತೆಲಂಗಾಣ ಸರ್ಕಾರ ನೀಡಿದ್ದಕ್ಕಿಂತ ಒಂದೇ ಒಂದು ಹೆಚ್ಚು ಉದ್ಯೋಗ ನೀಡಲಾಗಿದೆ ಎಂಬುದನ್ನು ಎಐಸಿಸಿ ಮಾಜಿ ಅಧ್ಯಕ್ಷರು ಸಾಬೀತುಪಡಿಸಿದರೆ ರಾಜಕೀಯ ತ್ಯಜಿಸುತ್ತೇನೆ ಎಂದು ಬಿಆರ್‌ಎಸ್ ಎಂಎಲ್‌ಸಿ ಕೆ ಕವಿತಾ ಮಂಗಳವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

ತೆಲಂಗಾಣ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕ ಭಟ್ಟಿ ವಿಕ್ರಮಾರ್ಕ ಅವರು ದೇವಸ್ಥಾನದಲ್ಲಿ ಅಫಿಡವಿಟ್‌ಗೆ ಸಹಿ ಹಾಕಿದ ಮತ್ತು ತೆಲಂಗಾಣದಲ್ಲಿ ಆರು ಭರವಸೆಗಳನ್ನು ಜಾರಿಗೆ ತರುವುದಾಗಿ ಪ್ರಮಾಣ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಅಸಮಂಜಸ ಮತ್ತು ಅಸಂಬದ್ಧ ಭರವಸೆಗಳನ್ನು ನೀಡುತ್ತಿದೆ ಎಂದು ದೂರಿದರು.

'ನಾನು ರಾಹುಲ್ ಗಾಂಧಿ ಜೀ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಲು ಬಯಸುತ್ತೇನೆ. ಕಾಂಗ್ರೆಸ್ ಆಡಳಿತವಿರುವ ಯಾವುದೇ ರಾಜ್ಯದಲ್ಲಿ, ತೆಲಂಗಾಣ ಸರ್ಕಾರ ನೀಡಿದ್ದಕ್ಕಿಂತ ಕನಿಷ್ಠ ಒಂದು ಹೆಚ್ಚು ಉದ್ಯೋಗವನ್ನು ನೀವು ನೀಡಿದ್ದರೆ, ನಾನು ವೈಯಕ್ತಿಕವಾಗಿ ರಾಜಕೀಯಕ್ಕೆ ರಾಜೀನಾಮೆ ನೀಡುತ್ತೇನೆ' ಎಂದು ಅವರು ಹೇಳಿದರು.

'ಇದನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ರಾಹುಲ್ ಗಾಂಧಿ ಅವರು ರಾಜಕೀಯಕ್ಕೆ ರಾಜೀನಾಮೆ ನೀಡುತ್ತೀರಾ?. ಒಂದು ವೇಳೆ ಇದನ್ನು ಸಾಬೀತುಪಡಿಸಲು ನಿಮಗೆ ಸಾಧ್ಯವಾಗದಿದ್ದರೆ, ತೆಲಂಗಾಣದ ನಿರುದ್ಯೋಗಿ ಯುವಕರಿಗೆ ಸುಳ್ಳು ಹೇಳಬೇಡಿ. ಜನರಿಗೆ ಮೋಸ ಮಾಡಬೇಡಿ, ಬಾಂಡ್ ಪೇಪರ್ ಬಳಸಿ ನಮ್ಮ ಜನರಿಗೆ ಮೋಸ ಮಾಡಬೇಡಿ' ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ನ ಎಲ್ಲಾ 223 ಅಭ್ಯರ್ಥಿಗಳು ಬಾಂಡ್ ಪೇಪರ್‌ಗಳಿಗೆ ಸಹಿ ಹಾಕಿದ್ದಾರೆ. ಆದರೆ, ಆ ರಾಜ್ಯದಲ್ಲಿ ಅವರು ನೀಡಿದ ಐದು ಭರವಸೆಗಳು ಈಡೇರಿಲ್ಲ ಮತ್ತು ಇಲ್ಲಿಯವರೆಗೆ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್, ತಾವು ಸರ್ಕಾರ ರಚಿಸಿದ 100 ದಿನಗಳಲ್ಲಿ 2.60 ಲಕ್ಷ ಉದ್ಯೋಗಗಳ ಭರ್ತಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು. ಆದರೆ, ಇಲ್ಲಿಯವರೆಗೆ ಏನೂ ಆರಂಭವಾಗಿಲ್ಲ ಎಂದು ಕವಿತಾ ಆರೋಪಿಸಿದ್ದಾರೆ.

ಬಿಆರ್‌ಎಸ್ ಸರ್ಕಾರವು 2.32 ಲಕ್ಷ ಉದ್ಯೋಗಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಿದೆ ಮತ್ತು ಈಗಾಗಲೇ 1.60 ಲಕ್ಷ ಉದ್ಯೋಗಗಳನ್ನು ಭರ್ತಿ ಮಾಡಲಾಗಿದೆ ಎಂದು ಕವಿತಾ ತಿಳಿಸಿದ್ದಾರೆ.

'ನಾನು ಅಫಿಡವಿಟ್‌ಗೆ ಸಹಿ ಹಾಕಿದ್ದೇನೆ ಮತ್ತು ಆರು ಭರವಸೆಗಳನ್ನು ಜಾರಿಗೆ ತರುವುದಾಗಿ ದೇವರ ಸಮ್ಮುಖದಲ್ಲಿ ಪ್ರಮಾಣ ಮಾಡಿದ್ದೇನೆ' ಎಂದು ಭಟ್ಟಿ ವಿಕ್ರಮಾರ್ಕ ಟ್ವೀಟ್ ಮಾಡಿದ್ದಾರೆ.

SCROLL FOR NEXT