ದೇಶ

ವಿಶೇಷ ಅಧಿವೇಶನದಲ್ಲಿ ಒಂದು ರಾಷ್ಟ್ರ - ಒಂದು ಚುನಾವಣೆ, ಮಹಿಳಾ ಮೀಸಲಾತಿ ಮಸೂದೆ ಮಂಡನೆ ಸಾಧ್ಯತೆ

Lingaraj Badiger

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದಿಢೀರ್ ಸಂಸತ್ ವಿಶೇಷ ಅಧಿವೇಶನ ಕರೆದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. 

ಈ ವಿಶೇಷ ಅಧಿವೇಶನ ಕರೆದಿರುವ ಹಿಂದಿನ ಉದ್ದೇಶದ ಬಗ್ಗೆ ಕೇಂದ್ರ ಇದುವರೆಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ, ಈ ಅಧಿವೇಶನದಲ್ಲಿ ಒಂದು ರಾಷ್ಟ್ರ - ಒಂದು ಚುನಾವಣೆ, ಮಹಿಳಾ ಮೀಸಲಾತಿ ಮಸೂದೆ ಸೇರಿದಂತೆ ಕೆಲವು ಮಹತ್ವದ ಮಸೂದೆಗಳನ್ನು ಮಂಡಿಸುವ ಸಾಧ್ಯತೆ ಇದೆ.

ವಿಶೇಷ ಅಧಿವೇಶನದಲ್ಲಿ "ಒಂದು ರಾಷ್ಟ್ರ ಒಂದು ಚುನಾವಣೆ" ಮಸೂದೆ, ಏಕರೂಪ ನಾಗರಿಕ ಸಂಹಿತೆ ಪರಿಚಯಿಸುವ ಮಸೂದೆ ಮತ್ತು ಮಹಿಳಾ ಮೀಸಲಾತಿ ಮಸೂದೆ ಸಹ ಚರ್ಚೆಗೆ ಬರಲಿವೆ ಎನ್ನಲಾಗುತ್ತಿದೆ.

ಯುಸಿಸಿಯು ಬಿಜೆಪಿಯ ಅತ್ಯಂತ ಹಳೆಯ ಚುನಾವಣಾ ಭರವಸೆಗಳಲ್ಲಿ ಒಂದಾಗಿದೆ ಮತ್ತು ಇದು ದೀರ್ಘಕಾಲದಿಂದ ಬಾಕಿ ಉಳಿದಿದೆ. 2024 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ರಾಜಕೀಯ ಬೆಂಬಲವನ್ನು ಕ್ರೋಢೀಕರಿಸಲು ಪ್ರಧಾನಿ ಮೋದಿ ಅಂತಿಮವಾಗಿ ಯುಸಿಸಿ ಜಾರಿಗೊಳಿಸುತ್ತರೆಯೇ? ಎನ್ನುವುದನ್ನು ತಿಳಿಯಲು ಇನ್ನು ಒಂದು ವಾರ ಕಾಯಬೇಕು.

ಇನ್ನು 2014 ರಲ್ಲಿ, ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ಜಾರಿಗೊಳಿಸುವುದಾಗಿ ಭರವಸೆ ನೀಡಿತು ಮತ್ತು 2019 ರ ಪ್ರಣಾಳಿಕೆಯಲ್ಲೂ ಮಹಿಳೆ ಮೀಸಲಾತಿ ಭರವಸೆ ನೀಡಿತ್ತು. ಆದರೆ ಇದುವರೆಗೂ ಈ ನಿಟ್ಟಿನಲ್ಲಿ ಕೇಂದ್ರ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಈಗ ಈ ಮಸೂದೆಯನ್ನು ಅಂಗೀಕರಿಸುವುದರಿಂದ ಪ್ರಧಾನಿ ಮೋದಿ ಮಹಿಳಾ ಮತದಾರರ ಬೆಂಬಲ ಗಳಿಸಬಹುದು ಮತ್ತು ಪ್ರತಿಸ್ಪರ್ಧಿಗಳಿಗೆ ಶಾಕ್ ನೀಡಬಹುದು ಎನ್ನಲಾಗುತ್ತಿದೆ.

ಸೆಪ್ಟೆಂಬರ್ 18 ರಿಂದ 22 ರವೆಗೆ 5 ದಿನಗಳ ಸಂಸತ್ ವಿಶೇಷ ಅಧಿವೇಶನ ನಡೆಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಎಕ್ಸ್‌ನಲ್ಲಿ ಪ್ರಕಟಿಸಿದ್ದಾರೆ.

SCROLL FOR NEXT