ದೇಶ

ಜೆಡಿಯು ಮತ್ತೆ ಎನ್‌ಡಿಎಗೆ ವಾಪಸ್ ವದಂತಿ ತಳ್ಳಿಹಾಕಿದ ನಿತೀಶ್ ಕುಮಾರ್

Lingaraj Badiger

ಪಾಟ್ನಾ: ಜೆಡಿಯು ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಎಗೆ ಮರಳಿಲಿದೆ ಎಂಬ ಮಾಧ್ಯಮಗಳ ವರದಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಜೆಡಿಯು ವರಿಷ್ಠ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಒಂದು ವರ್ಷದ ಹಿಂದೆಯೇ ನಾವು ಎನ್ ಡಿಎ ಜೊತೆ ಸಂಬಂಧ ಕಡಿದುಕೊಂಡಿದ್ದು, ಈಗ ಇಂಡಿಯಾ ಮೈತ್ರಿಕೂಟವನ್ನು ಬಲಪಡಿಸುವುದೇ ತಮ್ಮ ಗುರಿ ಎಂದಿದ್ದಾರೆ.

ಊಹಾಪೋಹಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರ್, "ಕ್ಯಾ ಫಾಲ್ತು ಬಾತ್ ಹೈ" ಎಂದಿದ್ದಾರೆ.

ಬಿಜೆಪಿ-ವಿರೋಧಿ ಇಂಡಿಯಾ ಮೈತ್ರಿಕೂಟದ ಪ್ರಮುಖ ವ್ಯಕ್ತಿಯಾಗಿರುವ ಜೆಡಿಯು ನಾಯಕ ನಿತೀಶ್ ಅವರು, ತಮ್ಮ ಪಕ್ಷದ ಸಹೋದ್ಯೋಗಿಗಳು ತಾವು "ಒಳ್ಳೆಯ ಪ್ರಧಾನಿಯಾಗುವ ಎಲ್ಲಾ ಗುಣಗಳನ್ನು" ಹೊಂದಿದ್ದಾರೆ ಎಂದು ಮಾತನಾಡುವುದರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂತಹ ಹೇಳಿಕೆಗಳನ್ನು ನೀಡಬೇಡಿ ಎಂದು ನಾನು ಈಗಾಗಲೇ ನನ್ನ ಪಕ್ಷದ ಸಹೋದ್ಯೋಗಿಗಳಿಗೆ ಹೇಳಿದ್ದೇನೆ. ಇಂಡಿಯಾ ಮೈತ್ರಿಕೂಟದ ಏಕತೆಯನ್ನು ಬಲಪಡಿಸುವುದು ನನ್ನ ಏಕೈಕ ಆಶಯವಾಗಿದೆ. ನಾನು ಈ ದಿಕ್ಕಿನಲ್ಲಿ ಮಾತ್ರ ಕೆಲಸ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.

ಬಿಹಾರ ವಿಧಾನಸಭೆಯ ಉಪ ಸ್ಪೀಕರ್ ಮತ್ತು ಹಿರಿಯ ಜೆಡಿಯು ನಾಯಕ ಮಹೇಶ್ವರ್ ಹಜಾರಿ ಅವರು ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಲು ನಿತೀಶ್ ಕುಮಾರ್‌ ಸೂಕ್ತ ವ್ಯಕ್ತಿ. ಅವರಿಗಿಂತ ಸಮರ್ಥ ನಾಯಕ ಮತ್ತೊಬ್ಬರಿಲ್ಲ ಎಂದು ಹೇಳಿದ್ದರು.

ಸಚಿವ ಸಂಪುಟ ವಿಸ್ತರಣೆಯ ಸಾಧ್ಯತೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿತೀಶ್ ಕುಮಾರ್, ಈ ಪ್ರಶ್ನೆಯನ್ನು ಉಪ ಮುಖ್ಯಮಂತ್ರಿಗೆ ಕೇಳಿ ಎಂದು ಹೇಳಿ ಚೆಂಡನ್ನು ತೇಜಸ್ವಿ ಯಾದವ್ ಅವರ ಅಂಗಳಕ್ಕೆ ತಳ್ಳಿದರು.

SCROLL FOR NEXT