ದೇಶ

ಡಿಸೆಂಬರ್ ವೇಳೆಗೆ ರಾಷ್ಟ್ರೀಯ ಹೆದ್ದಾರಿಗಳನ್ನು ಗುಂಡಿ ಮುಕ್ತಗೊಳಿಸಲಾಗುವುದು: ಕೇಂದ್ರ ಸಚಿವ

Srinivas Rao BV

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳ ಜಾಲವನ್ನು ಡಿಸೆಂಬರ್ ವೇಳೆಗೆ ಗುಂಡಿ ಮುಕ್ತಗೊಳಿಸುವುದಕ್ಕೆ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ (ಎಂಒಆರ್ ಟಿಹೆಚ್) ಉದ್ದೇಶಿಸಲಾಗಿದೆ.

ಈ ಉದ್ದೇಶವನ್ನು ಸಾಧಿಸಲು ಗುಣಮಟ್ಟದ ನಿರ್ವಹಣೆ ಹಾಗೂ ರಸ್ತೆಗಳ ಸಕಾಲಿಕ ದುರಸ್ತಿಯನ್ನು ಖಾತ್ರಿಪಡಿಸಿಕೊಳ್ಳಲು ಸಚಿವಾಲಯ ಕಾಂಟ್ರಾಕ್ಟ್ ಗಳನ್ನು ನೀಡಲು ಹೊಸ ವ್ಯವಸ್ಥೆಯನ್ನು ಪರಿಚಯಿಸುವ ಸಾಧ್ಯವಿದೆ. 

ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ಬಗ್ಗೆ ಮಾತನಾಡಿದ್ದು, ರಾಷ್ಟ್ರೀಯ ಹೆದ್ದಾರಿಗಳನ್ನು ನಿಯಮಿತ ಮೇಲ್ವಿಚಾರಣೆಗಾಗಿ ಸ್ವತಂತ್ರ ಸಿವಿಲ್ ಇಂಜಿನಿಯರ್‌ಗಳಿಗೆ ಹಸ್ತಾಂತರಿಸುವ ನೀತಿಯನ್ನು ಅಂತಿಮಗೊಳಿಸಲು ಸಚಿವಾಲಯವು ಅಂತಿಮ ಹಂತದಲ್ಲಿದೆ ಎಂದು ಹೇಳಿದ್ದಾರೆ. 

“ಪಿಡಬ್ಲ್ಯುಡಿ ಸಚಿವರಾಗಿ, ನಾನು ಯೋಜನೆಯನ್ನು ಪ್ರಾರಂಭಿಸಿದ್ದು, ಅದರ ಅಡಿಯಲ್ಲಿ ಡಿಪ್ಲೋಮಾ ಅಥವಾ ಪದವಿ ಹೊಂದಿರುವ ಸಿವಿಲ್ ಎಂಜಿನಿಯರ್‌ಗಳಿಗೆ ಟೆಂಡರ್‌ಗಳಿಲ್ಲದೆ ಅಂದಾಜು ವೆಚ್ಚದ ಆಧಾರದ ಮೇಲೆ 15 ಲಕ್ಷ ರೂ.ಗಳ ಕೆಲಸವನ್ನು (ರಸ್ತೆ ನಿರ್ವಹಣೆ) ನೀಡಲಾಯಿತು. ಯೋಜನೆ ಯಶಸ್ವಿಯಾಯಿತು. ಅದೇ ರೀತಿಯಲ್ಲಿ, ನಾವು ರಾಷ್ಟ್ರೀಯ ಹೆದ್ದಾರಿಗಳ ಪ್ರಸ್ತಾವನೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸಿವಿಲ್ ಎಂಜಿನಿಯರ್‌ಗಳಿಗೆ 100 ಕಿಲೋಮೀಟರ್ ಉದ್ದದ ರಸ್ತೆ ನೀಡಲಾಗುವುದು. ಒಂದು ವೇಳೆ ಗುಂಡಿ ಬಿದ್ದರೆ ಅವರಿಗೆ ಕಡಿಮೆ ಸಂಭಾವನೆ ಸಿಗಲಿದೆ ಎಂದು ಗಡ್ಕರಿ ಹೇಳಿದ್ದಾರೆ.

ಏಕಕಾಲದಲ್ಲಿ, ಸಚಿವಾಲಯವು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ವ್ಯಾಪ್ತಿಯಲ್ಲಿ ರಸ್ತೆಗಳ ಸುರಕ್ಷತಾ ಲೆಕ್ಕಪರಿಶೋಧನೆಯನ್ನು ಪ್ರಾರಂಭಿಸಲು ಸಜ್ಜಾಗಿದೆಇದಕ್ಕಾಗಿ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (IIT ಗಳು) ಮತ್ತು ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲಿದೆ. ಸಂಶೋಧನೆಗಳು ಲಭ್ಯವಾದ ನಂತರ, ಹೆದ್ದಾರಿಗಳಲ್ಲಿ ಪ್ರಯಾಣವನ್ನು ಸುರಕ್ಷಿತವಾಗಿಸಲು ಸರಿಪಡಿಸುವ ಕ್ರಮಗಳನ್ನು ಪ್ರಾರಂಭಿಸುತ್ತದೆ ಎಂದು ಗಡ್ಕರಿ ಮಾಹಿತಿ ನೀಡಿದ್ದಾರೆ.

ಎಲ್ಲಾ ರಸ್ತೆಗಳನ್ನು ಮ್ಯಾಪ್ ಮಾಡಲಾಗುತ್ತಿದೆ ಮತ್ತು ಎಲ್ಲಾ ರಸ್ತೆಗಳು ಕೆಲವು ನಿರ್ವಹಣಾ ಒಪ್ಪಂದಗಳ ಅಡಿಯಲ್ಲಿರಬೇಕು ಎಂಬ ವ್ಯವಸ್ಥೆಯಲ್ಲಿ ಸಚಿವಾಲಯವು ಕಾರ್ಯನಿರ್ವಹಿಸುತ್ತಿದೆ ಎಂದು MoRTH ಕಾರ್ಯದರ್ಶಿ ಅನುರಾಗ್ ಜೈನ್ ವಿವರಿಸಿದ್ದಾರೆ.

ಈ ವಿಷಯವಾಗಿ ಎಲ್ಲ ಪ್ರಾದೇಶಿಕ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಆಂತರಿಕ ಗುರಿಯನ್ನು ನಿಗದಿಪಡಿಸಲಾಗಿದೆ. ಡಿಸೆಂಬರ್ ವೇಳೆಗೆ ಯಾವುದೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುಂಡಿಗಳು ಉಂಟಾಗದಂತೆ ನೋಡಿಕೊಳ್ಳಬೇಕು,'' ಎಂದು ಸಚಿವರು ತಿಳಿಸಿದ್ದಾರೆ.

SCROLL FOR NEXT