ಮನೀಶ್ ಸಿಸೋಡಿಯಾ
ಮನೀಶ್ ಸಿಸೋಡಿಯಾ 
ದೇಶ

ದೆಹಲಿ ಅಬಕಾರಿ ಹಗರಣ: ಸಿಸೋಡಿಯಾ ಜಾಮೀನು ಅರ್ಜಿ ವಿಚಾರಣೆ ಮುಕ್ತಾಯ; ತೀರ್ಪು ಕಾಯ್ದಿರಿಸಿದ ದೆಹಲಿ ಕೋರ್ಟ್

Lingaraj Badiger

ನವದೆಹಲಿ: ರದ್ದಾಗಿರುವ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಎಎಪಿ ನಾಯಕ, ದೆಹಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿದ ದೆಹಲಿ ನ್ಯಾಯಾಲಯ, ಶನಿವಾರ ತೀರ್ಪು ಕಾಯ್ದಿರಿಸಿದೆ.

ಸಿಬಿಐ ಮತ್ತು ಇಡಿ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರು ಕೇಂದ್ರ ತನಿಖಾ ಸಂಸ್ಥೆಗಳ ವಾದ ಮತ್ತು ಸಿಸೋಡಿಯಾ ಪರ ವಕೀಲರ ವಾದ, ಪ್ರತಿವಾದ ಆಲಿಸಿದ ನಂತರ ಏಪ್ರಿಲ್ 30ಕ್ಕೆ ತೀರ್ಪು ಕಾಯ್ದಿರಿಸಿದ್ದಾರೆ.

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮುಂಬರುವ ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ಎರಡೂ ಪ್ರಕರಣಗಳಲ್ಲಿ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ದೆಹಲಿ ಅಬಕಾರಿ ನೀತಿಯನ್ನು ಮಾರ್ಪಡಿಸುವಾಗ ಅಕ್ರಮಗಳು ನಡೆದಿವೆ ಎಂದು ಸಿಬಿಐ ಮತ್ತು ಇಡಿ ಆರೋಪಿಸಿವೆ. ಪರವಾನಗಿದಾರರಿಗೆ ಅನಗತ್ಯ ಅನುಕೂಲ ಮಾಡಿಕೊಡಲಾಗಿದೆ ಮತ್ತು ಪರವಾನಗಿ ಶುಲ್ಕವನ್ನು ಮನ್ನಾ ಮಾಡಲಾಗಿದೆ ಅಥವಾ ಕಡಿಮೆ ಮಾಡಲಾಗಿದೆ ಮತ್ತು ಸಕ್ಷಮ ಪ್ರಾಧಿಕಾರದ ಅನುಮೋದನೆಯಿಲ್ಲದೆ ಪರವಾನಗಿಗಳನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಫೆಬ್ರವರಿ 2023 ರಲ್ಲಿ, ದೆಹಲಿಯ ಹೊಸ ಅಬಕಾರಿ ನೀತಿ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿದೆ. ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ ನಂತರ ಈ ನೀತಿಯನ್ನು ಹಿಂಪಡೆಯಲಾಗಿದೆ.

SCROLL FOR NEXT