ವಯನಾಡು: ಭೀಕರ ಭೂಕುಸಿತ ಸಂಭವಿಸಿದ ಕೇರಳದ ವಯನಾಡಿಗೆ ಭೇಟಿ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 'ನನ್ನ ತಂದೆ ಸತ್ತಾಗ ಆಗಿದ್ದಷ್ಟೇ ನೋವು ಈಗಾಗುತ್ತಿದೆ' ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಕೇರಳದ ವಯನಾಡಿನ ಚೂರಲ್ಮಲಾದಲ್ಲಿ ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ್ದು, ಸಂತ್ರಸ್ಥರಿಗಾಗಿ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ನಿರಾಶ್ರಿತ ಶಿಬಿರಗಳಲ್ಲಿರುವ ನಿರಾಶ್ರಿತರನ್ನು ಭೇಟಿ ಮಾಡಿ ಸಂತೈಸಿದರು.
ಚೂರಲ್ಮಲಾದಲ್ಲಿ ಭಾರತೀಯ ಸೈನಿಕರು ಮತ್ತು NDRF ತಂಡ ರಕ್ಷಣಾ ಕಾರ್ಯಾಚರಣೆಗಾಗಿ ನಿರ್ಮಿಸಿದ ತಾತ್ಕಾಲಿಕ ಸೇತುವೆಯ ಮೇಲೆ ಸಾಗಿ ಪ್ರವಾಹ ಪೀಡಿತ ಸ್ಥಳವನ್ನು ಪರಿಶೀಲಿಸಿ ಬಳಿಕ ಸಂತ್ರಸ್ಥರನ್ನು ಭೇಟಿ ಮಾಡಿದರು. ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ''ತಮ್ಮ ತಂದೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ನಿಧನರಾದ ದಿನ ಅನುಭವಿಸಿದಷ್ಟೇ ನೋವು ಈಗಾಗುತ್ತಿದೆ.
ಇಲ್ಲಿನ ಅನೇಕರು ತಮ್ಮ ಇಡೀ ಕುಟುಂಬವನ್ನು ಕಳೆದುಕೊಂಡಿದ್ದಾರೆ. ಇದು ಅವರ ನೋವನ್ನು ಇನ್ನಷ್ಟು ಹೆಚ್ಚಿಸಿದೆ. ದುರಂತವು ಅಗಾಧವಾಗಿದೆ ಮತ್ತು ವಯನಾಡ್ ಅನ್ನು ಸಹಜ ಸ್ಥಿತಿಗೆ ತರಲು ಅಗತ್ಯವಾದ ಕೆಲಸವು ಗಣನೀಯವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಅಂತೆಯೇ ''ಈಗ ರಾಜಕೀಯಕ್ಕೆ ಸಮಯವಲ್ಲ. ಈ ಕಷ್ಟದ ಸಮಯದಲ್ಲಿ ಇಡೀ ದೇಶವು ವಯನಾಡ್‌ನೊಂದಿಗೆ ನಿಂತಿದೆ. ನಾವು ಒಗ್ಗೂಡಬೇಕು ಮತ್ತು ಜನರನ್ನು ಬೆಂಬಲಿಸಲು ಅಗತ್ಯವಿರುವ ಎಲ್ಲಾ ನೆರವು ನೀಡಲು ಒಟ್ಟಾಗಿ ಕೆಲಸ ಮಾಡಬೇಕು" ಎಂದು ರಾಹುಲ್ ಹೇಳಿದರು.
ಮಂಗಳವಾರದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಗುರುವಾರ 275 ದಾಟಿದ್ದು, ನಾಪತ್ತೆಯಾದವರಿಗಾಗಿ ಶೋಧ ಮುಂದುವರಿದಿದೆ. ಗುರುವಾರ ಮಧ್ಯಾಹ್ನ ಸುರಿದ ಭಾರಿ ಮಳೆಯಿಂದಾಗಿ ಶೋಧ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ನಾಳೆ ಮತ್ತೆ ಸೇನೆ ಮತ್ತು NDRF ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಲಿದ್ದಾರೆ.
ಅಂದಹಾಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಗುರುವಾರ ವಯನಾಡಿಗೆ ಭೇಟಿ ನೀಡಿದ್ದರು.