ರುದ್ರಪ್ರಯಾಗ: ಮೇಘಸ್ಫೋಟದ ನಂತರ ಉತ್ತರಾಖಂಡ್‌ನ ಹಿಮಾಲಯದ ಕೇದಾರನಾಥ ದೇಗುಲಕ್ಕೆ ತೆರಳುವ ಚಾರಣ ಮಾರ್ಗದಲ್ಲಿ ಸಿಲುಕಿರುವ ಯಾತ್ರಾರ್ಥಿಗಳ ರಕ್ಷಣಾ ಕಾರ್ಯಾಚರಣೆ ಶನಿವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ. 10,500 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಕೆಲವರನ್ನು ವಾಯುಪಡೆಯ ಹೆಲಿಕಾಪ್ಟರ್‌ಗಳ ಮೂಲಕ ರವಾನಿಸಲಾಗಿದೆ. ಸುಮಾರು 1,300 ಯಾತ್ರಾರ್ಥಿಗಳು ಕೇದಾರನಾಥ, ಭೀಮಾಲಿ ಮತ್ತು ಗೌರಿಕುಂಡ್‌ನಲ್ಲಿ ಸಿಲುಕಿಕೊಂಡಿದ್ದು, ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಭಾರತೀಯ ವಾಯುಪಡೆಯ ಚಿನೂಕ್ ಮತ್ತು ಎಂಐ17 ಹೆಲಿಕಾಪ್ಟರ್‌ಗಳು ಶುಕ್ರವಾರ ಈ ಪ್ರದೇಶದಿಂದ ಕೆಲವು ಯಾತ್ರಾರ್ಥಿಗಳನ್ನು ವಿಮಾನದಲ್ಲಿ ಕರೆದೊಯ್ದವು.
ಚಾರಣ ಮಾರ್ಗದ ಬಳಿ ಮೇಘಸ್ಫೋಟದ ನಂತರ ಹೆಚ್ಚಿನ ಸಂಖ್ಯೆಯ ಜನರು ನಾಪತ್ತೆಯಾಗಿದ್ದಾರೆ ಎಂಬ ವದಂತಿಯನ್ನು ರುದ್ರಪ್ರಯಾಗದ ಎಸ್ ಪಿ ವಿಶಾಖ ಅಶೋಕ್ ಭಡಾನೆ ತಳ್ಳಿಹಾಕಿದ್ದಾರೆ. ಬಹುತೇಕ ಎಲ್ಲಾರು ಮನೆಗೆ ತಲುಪಿದ್ದಾರೆ. ವದಂತಿಗಳನ್ನು ನಂಬಬೇಡಿ ಎಂದು ಅವರು ಸಾರ್ವಜನಿಕರಿಗೆ ಮನವಿ ಮಾಡಿದರು. ನೆಟ್‌ವರ್ಕ್ ಸಮಸ್ಯೆ ಮತ್ತು ಪ್ರತಿಕೂಲ ಹವಾಮಾನ ಅನೇಕ ಜನರು ತಮ್ಮ ಕುಟುಂಬಗಳನ್ನು ಸಂಪರ್ಕಿಸಲು ಸಾಧ್ಯವಾಗದಿರಬಹುದು" ಎಂದು ಅವರು ಹೇಳಿದರು.
ಶುಕ್ರವಾರ ಲಿಂಚೋಲಿಯ ಥಾರು ಕ್ಯಾಂಪ್ ಬಳಿ ಭೂಕುಸಿತದಲ್ಲಿ ಸಾವನ್ನಪ್ಪಿದ ಯಾತ್ರಿಕನನ್ನು ಶುಭಂ ಕಶ್ಯಪ್ ಎಂದು ಗುರುತಿಸಲಾಗಿದೆ. ಅವರು ಉತ್ತರ ಪ್ರದೇಶದ ಸಹರಾನ್‌ಪುರದ ನಿವಾಸಿಯಾಗಿದ್ದರು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜ್ವರ್ ತಿಳಿಸಿದ್ದಾರೆ. ಶವದ ಬಳಿ ಎರಡು ಮೊಬೈಲ್ ಫೋನ್‌ಗಳು ಪತ್ತೆಯಾಗಿದ್ದು, ಅವುಗಳನ್ನು ಲಿಂಚೋಲಿ ಪೊಲೀಸ್ ಹೊರಠಾಣೆಗೆ ಹಸ್ತಾಂತರಿಸಲಾಗಿದೆ ಎಂದು ರಾಜ್ವರ್ ಹೇಳಿದರು.
ಬುಧವಾರ ರಾತ್ರಿ ಲಿಂಚೋಲಿ ಬಳಿಯ ಜಂಗಲ್‌ಚಟ್ಟಿಯಲ್ಲಿ ಮೇಘಸ್ಫೋಟದ ಪರಿಣಾಮವಾಗಿ ಕೇದಾರನಾಥ ಚಾರಣ ಮಾರ್ಗದಲ್ಲಿ ವ್ಯಾಪಕ ಹಾನಿಯಾಗಿತ್ತು.
ರುದ್ರಪ್ರಯಾಗ ಆಡಳಿತದ ಸಲಹೆಯೊಂದಿಗೆ ಕೇದಾರನಾಥ ಯಾತ್ರೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. ಮಾರ್ಗದಲ್ಲಿ ಅವವಶೇಷಗಳನ್ನು ತೆರವುಗೊಳಿಸಿ ದುರಸ್ತಿ ಮಾಡುವವರೆಗೆ ಯಾತ್ರಾರ್ಥಿಗಳು ಎಲ್ಲಿದ್ದರೂ ಕಾಯುವಂತೆ ಮನವಿ ಮಾಡಲಾಗಿದೆ.
ಯಾತ್ರಾರ್ಥಿಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವವರ ಬಗ್ಗೆ ಅವರ ಸಂಬಂಧಿಕರಿಗೆ ಮಾಹಿತಿ ನೀಡಲು ಜಿಲ್ಲಾಡಳಿತ ಸಹಾಯವಾಣಿ ಸಂಖ್ಯೆಗಳು 7579257572 ಮತ್ತು 01364-233387 - ಮತ್ತು ಒಂದು ತುರ್ತು ಸಂಖ್ಯೆ 112 ಅನ್ನು ತೆರೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.