ನವದೆಹಲಿ: ದಂಗೆ ಪೀಡಿತ ಬಾಂಗ್ಲಾದೇಶದಲ್ಲಿ ಸಿಲುಕಿಕೊಂಡಿದ್ದ ಒಟ್ಟು 17 ಭಾರತೀಯ ಕಾರ್ಮಿಕರನ್ನು ಗಡಿ ಭದ್ರತಾ ಪಡೆ ಗುರುವಾರ ಸ್ಥಳಾಂತರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕರು ಸಂಕಷ್ಟದಲ್ಲಿ ಸಿಲುಕಿರುವ ಬಗ್ಗೆ ಬಿಎಸ್‌ಎಫ್ ತ್ರಿಪುರಾ ಫ್ರಾಂಟಿಯರ್ ಐಜಿ ಪಟೇಲ್ ಪಿಯೂಷ್ ಪುರುಸೊತ್ತಮ್ ದಾಸ್ ಬುಧವಾರ ಮಾಹಿತಿ ಪಡೆದಿದ್ದರು.
ರಾಮ್ ರೈಲ್ ಕ್ಯಾಂಬಿನಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಅಗರ್ತಲಾ ಮೂಲಕ ಸುರಕ್ಷಿತವಾಗಿ ಸಾಗಲು ಅನುಕೂಲವಾಗುವಂತೆ ಬಿಎಸ್‌ಎಫ್‌ಗೆ ಮನವಿ ಮಾಡಲಾಗಿತ್ತು. ಗಡಿ ಭದ್ರತಾ ಪಡೆ ಮತ್ತು ಬಾಂಗ್ಲಾದೇಶದ ಗಡಿ ಸುರಕ್ಷತಾ ಪಡೆಯ ನೋಡಲ್ ಅಧಿಕಾರಿಗಳ ಮಟ್ಟದ ಸಮನ್ವಯದಿಂದ ತ್ವರಿತಗತಿಯಲ್ಲಿ ಸಂಪರ್ಕ ಸಾಧಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
BSF ಮತ್ತು ಬಾಂಗ್ಲಾ ಗಡಿ ಸುರಕ್ಷತಾ ಪಡೆಯ ಸುಸಂಘಟಿತ ಕಾರ್ಯಾಚರಣೆ, ಪರಿಣಾಮಕಾರಿ ಕಾರ್ಯದಿಂದಾಗಿ 17 ಕಾರ್ಮಿಕರು ಸುರಕ್ಷಿತವಾಗಿ ಅಗರ್ತಲಾಕ್ಕೆ ಬಂದಿದ್ದಾರೆ. ಅಲ್ಲಿ ಅವರ ವಲಸಿಗ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಬಿಎಸ್ ಎಫ್ ವಶಕ್ಕೆ ನೀಡಲಾಯಿತು ಎಂದು ಅಧಿಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.