ಭೋಪಾಲ್: ಮಧ್ಯಪ್ರದೇಶದ ಎರಡು ಪ್ರತ್ಯೇಕ ಜಿಲ್ಲೆಗಳಲ್ಲಿ ಇಬ್ಬರು ಮಹಿಳೆಯರು ಬಂದೂಕು ತೊಳೆಯುವ ವಿಡಿಯೋಗಳು ವೈರಲ್ ಆಗಿದ್ದು ಇದು ರಾಜ್ಯದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಗನ್ ಸಂಸ್ಕೃತಿಯ ಆಘಾತಕಾರಿ ವಿಷಯ ಮುನ್ನೆಲೆಗೆ ಬರುವಂತೆ ಮಾಡಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೊಗಳಲ್ಲಿ ಒಂದು ಮೊರೆನಾ ಜಿಲ್ಲೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಘಟಕವನ್ನು ಭೇದಿಸಲು ಪೊಲೀಸರಿಗೆ ನೆರವಾಯಿತು. ಇನ್ನೊಂದು ವೀಡಿಯೊವು ಪಕ್ಕದ ದತಿಯಾ ಜಿಲ್ಲೆಯ ಪೊಲೀಸರು ವೀಡಿಯೊದಲ್ಲಿನ ಮಹಿಳೆಯನ್ನು ಹುಡುಕಲು ಶೋಧ ಕಾರ್ಯಾಚರಣೆಗೆ ಮುಂದಾಗುವಂತೆ ಮಾಡಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಮೊರೆನಾ ಜಿಲ್ಲೆಯ ವೀಡಿಯೊವು ಮಹಿಳೆಯೊಬ್ಬರು ಹೊಸದಾಗಿ ನಿರ್ಮಿಸಲಾಗಿರುವ ನಾಡ ಪಿಸ್ತೂಲ್ ಕ್ಲಚ್ ಅನ್ನು ಸ್ವಚ್ಛಗೊಳಿಸುತ್ತಿರುವುದನ್ನು ಕಾಣಬಹುದು. ಅಲ್ಲದೆ ವ್ಯಕ್ತಿಯೊಬ್ಬ ಪಿಸ್ತೂಲ್ ಅನ್ನು ಹೇಗೆ ಸ್ವಚ್ಛಗೊಳಿಸಬೇಕು ಎಂಬ ನಿರ್ದೇಶನಗಳನ್ನು ನೀಡುವುದನ್ನು ಕೇಳಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಮಹುವಾ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ವೀಡಿಯೊವನ್ನು ಪರಿಶೀಲಿಸಿದ ನಂತರ, ಪೊಲೀಸ್ ತಂಡವು ಶುಕ್ರವಾರ ರಾತ್ರಿ ಗಣೇಶಪುರ ಪ್ರದೇಶದ ಮನೆಯೊಂದರ ಮೇಲೆ ದಾಳಿ ನಡೆಸಿತು. ಅಲ್ಲಿ ಕಳೆದ ಆರು ತಿಂಗಳಿನಿಂದ ಅಕ್ರಮ ಶಸ್ತ್ರಾಸ್ತ್ರ ಘಟಕವನ್ನು ನಡೆಸಲಾಗುತ್ತಿತ್ತು ಎಂದು ಮಹುವಾ ಪೊಲೀಸ್ ಠಾಣೆಯ ಉಸ್ತುವಾರಿ ಪವನ್ ಸಿಂಗ್ ತಿಳಿಸಿದ್ದಾರೆ.
ಮನೆಯಿಂದ ಮೂರು ನಾಡ ಪಿಸ್ತೂಲ್‌ಗಳು ಮತ್ತು ಅನೇಕ ಅರೆ ನಿರ್ಮಿತ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಅಕ್ರಮವಾಗಿ ಬಂದೂಕುಗಳನ್ನು ತಯಾರಿಸಲು ಬಳಸಿದ ಉಪಕರಣಗಳು ಮತ್ತು ಕಚ್ಚಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಮಹಿಳೆಯ ಪತಿ ಶಕ್ತಿ ಸಖ್ವಾರ್ ಮತ್ತು ಅವರ ತಂದೆ ಬಿಹಾರಿಲಾಲ್ ಸಖ್ವಾರ್ ಅವರನ್ನು ಬಂಧಿಸಿದ್ದು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ವಿಶೇಷವಾಗಿ ಮೊರೆನಾ ಜಿಲ್ಲೆ, ಒಂದು ಕಡೆ ರಾಜಸ್ಥಾನ ಮತ್ತು ಇನ್ನೊಂದು ಬದಿಯಲ್ಲಿ ಉತ್ತರಪ್ರದೇಶ ಗಡಿ ಹೊಂದಿದೆ. ಅದೇ ಗ್ವಾಲಿಯರ್-ಚಂಬಲ್ ಪ್ರದೇಶದ ಪಕ್ಕದ ದಾತಿಯಾ ಜಿಲ್ಲೆಯಲ್ಲಿ, ಮಹಿಳೆಯೊಬ್ಬರು ಬಂದೂಕು ಝಳಪಿಸುತ್ತಿರುವ ವೈರಲ್ ಚಿತ್ರಗಳು ಶನಿವಾರ ವೈರಲ್ ಆಗಿವೆ. ಮಹಿಳೆ ಕೈಯಲ್ಲಿ ಕಂಟ್ರಿಮೇಡ್ ಪಿಸ್ತೂಲ್ ನೊಂದಿಗೆ ನಗುತ್ತಿರುವ ಫೋಟೋಗಳು ದತಿಯಾ ಜಿಲ್ಲೆಯ ಜಿಗ್ನಾ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಾಲಪುರ ಗ್ರಾಮದ್ದಾಗಿದೆ. ಫೋಟೋಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಬಂದೂಕು ಹಿಡಿದ ಮಹಿಳೆ ಯಾರು ಎಂದು ಕಂಡುಹಿಡಿಯಲು ತನಿಖೆಗಳು ಪ್ರಾರಂಭವಾಗಿವೆ.