ಸೆರೈಕೇಲಾ: ಸೆರೈಕೆಲಾ-ಖಾರ್ಸ್ವಾನ್ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಅವರ ಬೆಂಗಾವಲು ತಂಡದ ಭಾಗವಾಗಿದ್ದ ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಪೊಲೀಸ್ ತಂಡ ಸೊರೆನ್ ಅವರನ್ನು ಜಿಲ್ಲೆಯ ಅವರ ಸ್ವಗ್ರಾಮ ಜಿಲಿಂಗೋರಾದಲ್ಲಿ ಡ್ರಾಪ್ ಮಾಡಿ ಹಿಂದಿರುಗುತ್ತಿದ್ದಾಗ ಸೆರೈಕೆಲಾ-ಕಂದ್ರಾ ರಸ್ತೆಯ ಮುಡಿಯಾ ಚೌಕ್ ಬಳಿ ಮಧ್ಯರಾತ್ರಿ 1.30 ರ ಸುಮಾರಿಗೆ ಪೊಲೀಸ್ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ ಎಂದು ಅವರು ಹೇಳಿದ್ದಾರೆ.
ಅಪಘಾತದಲ್ಲಿ ಇತರ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ ಚಂಪೈ ಸೊರೆನ್ ಅವರು, ಪೊಲೀಸ್ ಸಿಬ್ಬಂದಿ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ನಿನ್ನೆ ತಡರಾತ್ರಿ ನನ್ನ ನಿವಾಸದಿಂದ ವಾಪಸಾಗುತ್ತಿದ್ದಾಗ ಬೆಂಗಾವಲು ಪಡೆಯಲ್ಲಿದ್ದ ವಾಹನವೊಂದು ಅಪಘಾತಕ್ಕೀಡಾಗಿದ್ದು, ಚಾಲಕ ಹಾಗೂ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ಅಪಘಾತದಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.