ಜಮ್ಮು-ಕಾಶ್ಮೀರ: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯಿಂದ ನಾಪತ್ತೆಯಾಗಿದ್ದ ಯುವತಿ ಸ್ಥಳೀಯರಲ್ಲದ ವ್ಯಕ್ತಿಯನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಆಗಸ್ಟ್ 16 ರ ಬೆಳಿಗ್ಗೆಯಿಂದ ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ದೂರುದಾರರು ಉತ್ತರ ಕಾಶ್ಮೀರ ಜಿಲ್ಲೆಯ ಕ್ರೀರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆಗಸ್ಟ್ 19 ರಂದು ಆ ಯುವತಿ ಹಿಂದೂ ಧರ್ಮಕ್ಕೆ ಮತಾತಂತರಗೊಂಡು ನವಿ ಮುಂಬೈಯ ಸಾಗರ್ ಪ್ರದೀಪ್ ಸಿಂಗ್ ಎಂಬುವರನ್ನು ವಿವಾಹವಾಗಿರುವ ವಿಷಯ ಶುಕ್ರವಾರ ತಿಳಿದುಬಂದಿತ್ತು. ನಂತರ ಬಿಎನ್ ಎಸ್ ನ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಅಪಹರಣ ಪ್ರಕರಣ ದಾಖಲಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಆದಾಗ್ಯೂ, ಅನೇಕ ಕಿಡಿಗೇಡಿಗಳು ಮತ್ತು ಸಮಾಜ ವಿರೋಧಿಗಳು ಈ ಘಟನೆಯನ್ನು ಬಳಸಿಕೊಂಡು ಫೋಸ್ಟ್ ಮಾಡುವ ಮೂಲಕ ಗೊಂದಲವನ್ನುಂಟುಮಾಡಲು ಯತ್ನಿಸುತ್ತಿರುವುದು ಕಂಡುಬಂದಿದೆ. ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
"ಈ ಘಟನೆಯ ಬಗ್ಗೆ ತಪ್ಪುದಾರಿಗೆಳೆಯುವ ವಿಷಯವನ್ನು ಹಂಚಿಕೊಳ್ಳದಂತೆ ಎಲ್ಲರಿಗೂ ಸೂಚಿಸಲಾಗಿದೆ. ಅಂತಹ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡಿದರೆ ಅವುಗಳನ್ನು ಡಿಲೀಟ್ ಮಾಡಲು ಸಲಹೆ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.