ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 'ಇಂಡಿಯಾ ಮೈತ್ರಿಕೂಟದ ಪ್ರಮುಖ ಪಾರ್ಟನ್ ಆಗಬೇಕು ಎಂದು ನಾವು ಬಯಸುತ್ತೇವೆ. ಶೀಘ್ರದಲ್ಲೇ ಈ ಸಂಬಂಧ ಅವರೊಂದಿಗೆ ಮಾತನಾಡಲು ಕೋಲ್ಕತ್ತಾಗೆ ಹೋಗುತ್ತೇನೆ ಎಂದು ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವುತ್ ಅವರು ಶನಿವಾರ ಹೇಳಿದ್ದಾರೆ.
'ಇಂಡಿಯಾ ಮೈತ್ರಿಕೂಟ ಮುನ್ನಡೆಸಲು ಸಿದ್ಧ' ಎಂಬ ದೀದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವುತ್ ಅವರು, "ಮಮತಾ ಜಿಯವರ ಈ ಅಭಿಪ್ರಾಯ ನಮಗೆ ತಿಳಿದಿದೆ. ಅವರು ಇಂಡಿಯಾ ಮೈತ್ರಿಕೂಟದ ಪ್ರಮುಖ ಪಾಲುದಾರರಾಗಬೇಕೆಂದು ನಾವು ಬಯಸುತ್ತೇವೆ. ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್ ಅಥವಾ ಶಿವಸೇನಾ ಆಗಿರಲಿ, ನಾವೆಲ್ಲರೂ ಒಟ್ಟಿಗೆ ಇದ್ದೇವೆ. ನಾವು ಶೀಘ್ರದಲ್ಲೇ ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತನಾಡಲು ಕೋಲ್ಕತ್ತಾಗೆ ಹೋಗುತ್ತೇವೆ" ಎಂದು ತಿಳಿಸಿದರು.
ಇನ್ನು ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟಿರುವ ಪಶ್ಚಿಮ ಬಂಗಾಳದಲ್ಲಿ ಯಶಸ್ವಿ ಮಾದರಿಯನ್ನು ತೋರಿಸಿದ್ದೇನೆ ಎಂದು ಶಿವಸೇನಾ(ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಹೇಳಿದ್ದಾರೆ.
"ಅವರು ತಮ್ಮ ಹೇಳಿಕೆಯನ್ನು ಮುಂದಿಟ್ಟಿದ್ದಾರೆ. ಏಕೆಂದರೆ ಅವರು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟು ಉತ್ತಮ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ... ಅವರ ಚುನಾವಣಾ ಅನುಭವ ಮತ್ತು ಹೋರಾಟದ ಮನೋಭಾವವನ್ನು ಅವರು ಹಂಚಿಕೊಂಡಿದ್ದಾರೆ. ಇಂಡಿಯಾ ಬ್ಲಾಕ್ ಸಭೆ ನಡೆದಾಗಲೆಲ್ಲಾ ನಮ್ಮ ಹಿರಿಯ ನಾಯಕರು ಒಟ್ಟಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ" ಎಂದು ಚತುರ್ವೇದಿ ತಿಳಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನುಭವಿಸಿದ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂಡಿಯಾ ಬ್ಲಾಕ್ ನಾಯಕಿಯನ್ನಾಗಿ ಮಾಡಬೇಕು ಎಂಬ ಟಿಎಂಸಿ ನಾಯಕರ ಸಲಹೆಗೆ ಡಿಸೆಂಬರ್ 3 ರಂದು ಪ್ರತಿಕ್ರಿಯಿಸಿದ ಪಕ್ಷದ ಸಂಸದ ಕೀರ್ತಿ ಆಜಾದ್, ಆಡಳಿತಾರೂಢ ಟಿಎಂಸಿ ವರಿಷ್ಠರು ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ ಎಂದು ಹೇಳಿದ್ದರು.