ಅಮರಾವತಿ: ಅಕ್ರಮ ಮತ್ತು ಅವೈಜ್ಞಾನಿಕ ಕೊಳಗಳ ಕುರಿತು ವರದಿಗೆ ತೆರಳಿದ್ದ ಪರಿಸರ ಕಾರ್ಯಕರ್ತನನ್ನು ಮೀನುಗಾರರು ಕಂಬಕ್ಕೆ ಕಟ್ಟಿ ಥಳಿಸಿರುವ ವಿಡಿಯೋ ವೈರಲ್ ಆಗುತ್ತಿದೆ.
ಆಂಧ್ರ ಪ್ರದೇಶದ ಡಾ.ಬಿ.ಆರ್.ಅಂಬೇಡ್ಕರ್ ಕೋಣಸೀಮ ಜಿಲ್ಲೆಯ ಉಪ್ಪಲಗುಪ್ತ ಮಂಡಲದ ಸಣ್ಣವಿಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆಕ್ವಾ ರೈತರು ಪರಿಸರ ಹೋರಾಟಗಾರ ಚಿಕ್ಕಂ ವೀರ ದುರ್ಗಾಪ್ರಸಾದ್ ಎಂಬುವವರನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.
ಮೂಲಗಳ ಪ್ರಕಾರ ಪರಿಸರ ಕಾರ್ಯಕರ್ತ ಚಿಕ್ಕಂ ವೀರ ದುರ್ಗಾಪ್ರಸಾದ್ ಎಂಬುವರು ಕಳೆದ ಕೆಲ ವರ್ಷಗಳಿಂದ ಅಕ್ರಮ ಅಕ್ವಾ ಕೆರೆ ಒತ್ತುವರಿ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಅಕ್ವಾ ಹೊಂಡಗಳ ಹೂಳೆತ್ತುವುದರಿಂದ ಪರಿಸರದ ಜತೆಗೆ ಜಲ ಮಾಲಿನ್ಯವಾಗುತ್ತದೆ ಎಂದು ವೀರ ದುರ್ಗಾಪ್ರಸಾದ್ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಪ್ರಕರಣದಲ್ಲಿ ಅಕ್ರಮ ಆಕ್ವಾ ಕೊಳಗಳನ್ನು ನಿಲ್ಲಿಸುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ.
ಆದಾಗ್ಯೂ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಕೆಲ ಆಕ್ವಾ ರೈತರು ಕೆರೆ ಹೂಳೆತ್ತಲು ಯತ್ನಿಸಿದ್ದರು. ಈ ಕುರಿತು ದುರ್ಗಾ ಪ್ರಸಾದ್ ಅಧಿಕಾರಿಗಳನ್ನು ಪ್ರಶ್ನಿಸಿದ್ದರು. ಆದರೆ ಅಧಿಕಾರಿಗಳು ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದೇ ನಾವು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಸಾಕ್ಷಿ ಸಂಗ್ರಹಿಸುವಂತೆ ದುರ್ಗಾ ಪ್ರಸಾದ್ ಗೆ ಸಲಹೆ ನೀಡಿದ್ದರು.
ಅದರಂತೆ ಸಾಕ್ಷಿ ಸಂಗ್ರಹಕ್ಕಾಗಿ ದುರ್ಗಾ ಪ್ರಸಾದ್ ಗ್ರಾಮದ ಆಕ್ವಾ ಕೊಳಗಳಿಗೆ ತೆರಳಿ ಅಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಇದನ್ನು ಗಮನಿಸಿದ ಕೆಲ ರೈತರು ಪ್ರಶ್ನಿಸಿದಾಗ ದುರ್ಗಾ ಪ್ರಸಾದ್ ಸುಮ್ಮನೆ ವಿಡಿಯೋ ಮಾಡುತ್ತಿದ್ದೇನೆ ಎಂದು ಸಮಜಾಯಿಷಿ ಹೇಳಿದ್ದಾರೆ. ಆದರೆ ಅನುಮಾನಗೊಂಡ ರೈತರು ದುರ್ಗಾ ಪ್ರಸಾದ್ ವಿರುದ್ಧ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ಆತನನ್ನು ಕಂಬಕ್ಕೆ ಕಟ್ಟಿ ಮತ್ತೆ ಹಲ್ಲೆ ಮಾಡಿದ್ದಾರೆ. ಬಳಿಕ ಕೆಲ ಗ್ರಾಮಸ್ಥರ ಮಧ್ಯಸ್ಥಿಕೆ ಮೇರೆಗೆ ದುರ್ಗಾ ಪ್ರಸಾದ್ ಗೆ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ.
ಬಳಿಕ ಗಾಯಾಳು ದುರ್ಗಾ ಪ್ರಸಾದ್ ಸಮೀಪದ ಅಮಲಾಪುರಂ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಬಳಿಕ ಉಪ್ಪಳಗುಪ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅವೈಜ್ಞಾನಿಕ ಆಕ್ವಾ ಕೊಳಗಳಿಂದ ಪರಿಸರಕ್ಕೆ ಹಾನಿ
ಇನ್ನು ಅಕ್ವಾಕಲ್ಚರ್ ಅಥವಾ ಅಕ್ವಾಫಾರ್ಮಿಂಗ್, ನಿಯಂತ್ರಿತ ಪರಿಸರದಲ್ಲಿ ಕೊಳದಲ್ಲಿ ಮೀನು, ಏಡಿ, ಬಸವನಹುಳುಗಳು, ಪಾಚಿಗಳು ಮತ್ತು ಇತರ ಜೀವಿಗಳನ್ನು ಬೆಳೆಸಲಾಗುತ್ತದೆ. ಅನೇಕ ಸಂದರ್ಭಗಳಲ್ಲಿ, ಮೀನು ತ್ಯಾಜ್ಯದ ದುಷ್ಪರಿಣಾಮಗಳನ್ನು ನಿಯಂತ್ರಿಸಲು ರೈತರು ಪ್ರತಿಜೀವಕ ರಾಸಾಯನಿಕಗಳ ಬಳಕೆ ಮಾಡುತ್ತಾರೆ.
ಇದರಿಂದ ಇಂತಹ ರಾಸಾಯನಿಕಗಳು ನೇರವಾಗಿ ಪರಿಸರ ವ್ಯವಸ್ಥೆ ಪ್ರವೇಶಿಸುತ್ತವೆ. ಸುತ್ತಲಿನ ಪ್ರದೇಶದ ಮಣ್ಣು, ನೀರು, ಅಂತರ್ಜಲ ಕಲುಷಿತತೆ ಮತ್ತು ಸ್ಥಳೀಯ ಜೀವ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳಿದ್ದಾರೆ.