ಜೌನ್‌ಪುರ: ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಬೆಂಗಳೂರು ಪೊಲೀಸರು ಶುಕ್ರವಾರ ಜೌನ್‌ಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ರೆಕಾರ್ಡ್ ರೂಂಗೆ ತೆರಳಿ ದಾಖಲೆ ಸಂಗ್ರಹಿಸಿದ್ದಾರೆ.
ಒಬ್ಬ ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿದಂತೆ ನಾಲ್ಕು ಸದಸ್ಯರ ಪೊಲೀಸ್ ತಂಡ ಬೆಂಗಳೂರಿನಿಂದ ಉತ್ತರ ಪ್ರದೇಶದ ಜೌನ್‌ಪುರಕ್ಕೆ ಇಂದು ಬೆಳಗ್ಗೆ ಆಗಮಿಸಿದ್ದು, ಸ್ಥಳೀಯ ಪೊಲೀಸರ ಸಹಾಯದಿಂದ ಅತುಲ್ ಸುಭಾಷ್ ಅವರ ಪತ್ನಿ ಮನೆಗೆ ಭೇಟಿ ನೀಡಿದ್ದಾರೆ. ಆದರೆ ಅತುಲ್ ಪತ್ನಿ ಹಾಗೂ ಅತ್ತೆ ಮನೆಯವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು, ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ.
ಜೌನ್‌ಪುರದಲ್ಲಿರುವ ಅತುಲ್ ಸುಭಾಷ್ ಅವರ ಪತ್ನಿಯ ನಿವಾಸದ ಹೊರಗೆ ಪೊಲೀಸರು ನೋಟಿಸ್ ಅಂಟಿಸಿದ್ದು, ಅದರಲ್ಲಿ 'ನಿಮ್ಮನ್ನು ವಿಚಾರಣೆ ಮಾಡಲು ಸಮಂಜಸವಾದ ಆಧಾರಗಳಿವೆ. ಮೂರು ದಿನಗಳೊಳಗೆ ಬೆಂಗಳೂರಿನ ತನಿಖಾಧಿಕಾರಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಖಾಸಗಿ ಸಂಸ್ಥೆಯೊಂದರ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿದ್ದ 34 ವರ್ಷದ ಅತುಲ್ ಸುಭಾಷ್ ಅವರು ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ತನ್ನ ಸಾವಿಗೆ ಪತ್ನಿ ಹಾಗೂ ಆಕೆಯ ಸಂಬಂಧಿಕರ ಕಿರುಕುಳವೇ ಕಾರಣ ಎಂದು ಆರೋಪಿಸಿ 24 ಪುಟಗಳ ಸೂಸೈಡ್ ನೋಟ್ ಬರೆದಿದ್ದಾರೆ.
ಪ್ರಕರಣವನ್ನು ಇತ್ಯರ್ಥಪಡಿಸಲು ನ್ಯಾಯಾಧೀಶರು 5 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದಾರೆ ಎಂದು ಅವರು ಅತುಲ್ ತಮ್ಮ ಆತ್ಮಹತ್ಯೆ ಪತ್ರದಲ್ಲಿ ಆರೋಪಿಸಿದ್ದಾರೆ.
ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಅವರ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಮಾರತಹಳ್ಳಿ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಸಂಬಂಧ ಎರಡು ವಿಶೇಷ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿದೆ ಮತ್ತು ಸಾಕ್ಷ್ಯಾಧಾರಗಳನ್ನು ಕಲೆ ಹಾಕಲಾಗುತ್ತಿದೆ.