ನವದೆಹಲಿ: ಸಂವಿಧಾನಕ್ಕೆ ವಿವಿಧ ತಿದ್ದುಪಡಿಗಳನ್ನು ತಂದಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ವಾಗ್ದಾಳಿ ನಡೆಸಿದರು. ಪ್ರತಿಪಕ್ಷ ಕಾಂಗ್ರೆಸ್ ಸಂವಿಧಾನವನ್ನು ಒಂದು ಕುಟುಂಬದ ಆಸ್ತಿ ಎಂದು ಪರಿಗಣಿಸಿತ್ತು. ಅಧಿಕಾರದಲ್ಲಿ ಉಳಿಯಲು ಅದಕ್ಕೆ ಹಲವು ಬಾರಿ ತಿದ್ದುಪಡಿ ತರಲಾಗಿತ್ತು ಎಂದು ಟೀಕಿಸಿದರು.
ರಾಜ್ಯಸಭೆಯಲ್ಲಿ ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಅಮಿತ್ ಶಾ, ಕಾಂಗ್ರೆಸ್ ಮೀಸಲಾತಿ ವಿರೋಧಿಯಾಗಿದ್ದು, ಹಿಂದುಳಿದ ವರ್ಗಗಳ ಅನುಕೂಲಕ್ಕಾಗಿ ಯಾವುದೇ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.
ಚುನಾವಣೆಯಲ್ಲಿ ಸೋತ ಬಳಿಕ EVMಗಳಲ್ಲಿ ಲೋಪ ಹುಡುಕಾಟ ನಡೆಸಿದ್ದಕ್ಕಾಗಿ ಕಾಂಗ್ರೆಸ್ ನ್ನು ಛೇಡಿಸಿದ ಅಮಿತ್ ಶಾ, ಸಂವಿಧಾನ ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸಿದೆ. ಒಂದು ರಕ್ತದ ಹನಿ ಚೆಲ್ಲದಂತೆ ಅಧಿಕಾರ ಹಸ್ತಾಂತರ ನಡೆಯುತ್ತದೆ. ಕಾಂಗ್ರೆಸ್ ಪಕ್ಷ ತನ್ನ ಸ್ವಂತ ಲಾಭಕ್ಕಾಗಿ ಸಂವಿಧಾನಕ್ಕೆ ಹಲವು ತಿದ್ದುಪಡಿ ತಂದಿದೆ. ದೇಶದ ಮೊದಲ ಚುನಾವಣೆಗೆ ಮುಂಚೆಯೇ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಜವಾಹರಲಾಲ್ ನೆಹರು ಸಂವಿಧಾನಕ್ಕೆ ಮೊದಲ ತಿದ್ದುಪಡಿ ತಂದಿದ್ದರು ಎಂದು ಅವರು ಹೇಳಿದರು.
ಜವಾಹರ್ ಲಾಲ್ ನೆಹರು ಪ್ರಧಾನಿಯಾಗಿದ್ದಾಗ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸಲು ಸಂವಿಧಾನಕ್ಕೆ 19A ಅನ್ನು ಸೇರಿಸಲಾಯಿತು.ಕಾಂಗ್ರೆಸ್ ಸಂವಿಧಾನವನ್ನು ಯಾವುದೇ ಸದನಗಳಲ್ಲಿ ತರದೆ 35 ಎ ಪರಿಚ್ಛೇದವನ್ನು ಸೇರಿಸುವ ಮೂಲಕ ವೈಯಕ್ತಿಕ ಆಸ್ತಿ ಎಂದು ಪರಿಗಣಿಸಿದೆ. ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಕಾಂಗ್ರೆಸ್ ಯಾವತ್ತೂ ಕೆಲಸ ಮಾಡಿಲ್ಲ, ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ 42ನೇ ಸಂವಿಧಾನ ತಿದ್ದುಪಡಿಯ ಮೂಲಕ ಲೋಕಸಭೆ, ವಿಧಾನಸಭೆಗಳ ಅಧಿಕಾರಾವಧಿಯನ್ನು ಹೆಚ್ಚಿಸಿತು ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸಂವಿಧಾನವನ್ನು ಒಂದು ಕುಟುಂಬದ ಖಾಸಗಿ ಆಸ್ತಿ ಎಂದು ಪರಿಗಣಿಸಿ, ಸಂಸತ್ತನ್ನು ವಂಚಿಸಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಹಲವು ವರ್ಷಗಳಿಂದ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ಕಸಿದುಕೊಂಡಿದೆ. ಕಾಂಗ್ರೆಸ್ ನವರು ಒಂದು ಕುಟುಂಬವನ್ನು ಮೆಚ್ಚಿಸುವುದನ್ನು ಬಿಟ್ಟರೇ ಬೇರೆ ಏನನ್ನೂ ಮಾಡಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.