ಶ್ರೀನಗರ: ಜಮ್ಮು-ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಎನ್ ಡಿಎ ಸೇರಲಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಈ ವರದಿಗಳನ್ನು ಪಕ್ಷ ತಳ್ಳಿಹಾಕಿದೆ.
ಜಮ್ಮು ಕಾಶ್ಮೀರ ಜನರನ್ನು ದಾರಿ ತಪ್ಪಿಸುವ ದುರುದ್ದೇಶದಿಂದ ಕೆಲ ಸೋಕಾಲ್ಡ್ ಪತ್ರಕರ್ತರು ಇಂತಹ ವರದಿ ಮಾಡುತ್ತಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯ ವಕ್ತಾರ ತನ್ವಿರ್ ಸಾದಿಕ್ ಹೇಳಿದ್ದಾರೆ.
ರಾಜ್ಯ ಸ್ಥಾನಮಾನಕ್ಕಾಗಿ ಬಿಜೆಪಿ ನೇತೃತ್ವದ ಎನ್ ಡಿಎ ಒಕ್ಕೂಟಕ್ಕೆ ಸೇರಲು ಒಮರ್ ಪಕ್ಷ ಸಿದ್ಧತೆ ನಡೆಸುತ್ತಿರಬಹುದು ಎಂಬ ಕೆಲ ಮಾಧ್ಯಮಗಳ ವರದಿ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಸಾದಿಕ್, ಇಂತಹ ಆಧಾರರಹಿತ ವದಂತಿ ಹಬ್ಬಿಸುವುದು ಅವಮಾನಕರ ಮತ್ತು ಬೇಜವಾಬ್ದಾರಿಯಾಗಿದೆ ಎಂದು ಕಿಡಿಕಾರಿದ್ದಾರೆ.
ಜನರ ದೃಷ್ಟಿಯಿಂದ ಒಮರ್ ಅಬ್ದುಲ್ಲಾ ಇತ್ತೀಚಿಗೆ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಇದನ್ನು ಸೋಕಾಲ್ಡ್ ಪತ್ರಕರ್ತರು ಬೇರೆ ರೀತಿಯಲ್ಲಿ ಹೇಳುವುದಾದರೆ ತಮ್ಮ ಆರೋಪಗಳನ್ನು ಪುರಾವೆಗಳೊಂದಿಗೆ ಸಮರ್ಥಿಸಲಿ ಅಥವಾ ಸುಳ್ಳನ್ನು ಒಪ್ಪಿಕೊಳ್ಳಲಿ. ಇಂತಹ ವಂಚಕ ತಂತ್ರಗಳಿಗೆ ಕಡಿವಾಣ ಹಾಕಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ವರದಿ ಹಿಂತೆಗೆದುಕೊಳ್ಳದೆ ಇದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾದಿಕ್ ಎಚ್ಚರಿಕೆ ನೀಡಿದ್ದಾರೆ.
ಜನರನ್ನು ದಾರಿ ತಪ್ಪಿಸುವ, ನಮ್ಮ ಪ್ರತಿಷ್ಠೆ ಹಾಳು ಮಾಡುವ ಇಂತಹ ಕಪೋಲಕಲ್ಪಿತ ಕಥೆಯನ್ನು ಕ್ಷಮೆಯಾಚನೆಯೊಂದಿಗೆ ತಕ್ಷಣವೇ ಹಿಂತೆಗೆದುಕೊಳ್ಳದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.