ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ತಾಪಮಾನ ಕುಸಿತ ದಾಖಲೆ ಬರೆದಿದ್ದು, ರಾಜಧಾನಿ ಶ್ರೀನಗರದಲ್ಲಿ 50 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲಾಗಿದೆ.
ಹೌದು.. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಶೀತ ಮಾರುತ ಮುಂದುವರೆದಿದ್ದು, ಪ್ರಮುಖವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ತಾಪಮಾನ ದಾಖಲೆ ಪ್ರಮಾಣದಲ್ಲಿ ಕುಸಿದಿದೆ. ರಾಜಧಾನಿ ಶ್ರೀನಗರದಲ್ಲಿ ತಾಪಮಾನ ಮೈನಸ್ 7 ಡಿಗ್ರಿಗೆ ಕುಸಿದಿದ್ದು, ಇದು ಕಳೆದ 50 ವರ್ಷಗಳಲ್ಲೇ ಶ್ರೀನಗರದಲ್ಲಿ ದಾಖಲಾದ ಕನಿಷ್ಠ ತಾಪಮಾನವಾಗಿದೆ.
1974ರಲ್ಲಿ ಮೈನಸ್ 10.3 ಡಿ.ಸೆ ದಾಖಲಾಗಿದ್ದು ಇದುವರೆಗಿನ ಅತ್ಯಂತ ಕನಿಷ್ಠ ಪ್ರಮಾಣವಾಗಿದೆ. ಇನ್ನು ದಕ್ಷಿಣ ಕಾಶ್ಮೀರದ ಉಷ್ಣಾಂಶ ಶೂನ್ಯಕ್ಕಿಂತ ಕೆಳಗೆ ಇಳಿದ ಪರಿಣಾಮ ಪ್ರಸಿದ್ಧ ದಾಲ್ ಸರೋವರ ಭಾಗಶಃ ಹೆಪ್ಪುಗಟ್ಟಿದೆ. ಆದರೆ ಭಾನುವಾರ ಕೊಂಚ ಏರಿಕೆ ಕಂಡು ಮೈನಸ್ 4.6 ಡಿ.ಸೆ.ಗೆ ತಲುಪಿತ್ತು.
ಇನ್ನು ಹಿಮಾಚಲ ಪ್ರದೇಶದ ಟಬೋದಲ್ಲೂ ತಾಪಮಾನ ದಾಖಲೆ ಮಟ್ಟದಲ್ಲಿ ಕುಸಿದಿದ್ದು, ಭಾನುವಾರ ಮೈನಸ್ 11.6 ಡಿ.ಸೆ. ತಾಪಮಾನ ದಾಖಲಾಗಿದೆ. ಇದು ಭಾನುವಾರ ದೇಶದಲ್ಲಿ ದಾಖಲಾದ ಅತ್ಯಂತ ಕನಿಷ್ಠ ತಾಪಮಾನವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕಠಿಣ ಚಳಿಗಾಲದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಜನರು ಬೆಂಕಿಯ ಮೊರೆ ಹೋಗುತ್ತಿದ್ದು, ಬೆಂಕಿಯ ಸುತ್ತಲೂ ಕುಳಿತು ಬೆಚ್ಚಗಿನ ಬಟ್ಟೆಗಳನ್ನು ಧರಿಸಿರುವುದು ಸಾಮಾನ್ಯವಾಗಿವೆ.
ಈ ಬಗ್ಗೆ ಮಾತನಾಡಿರುವ ಸ್ಥಳೀಯ ನಿವಾಸಿಯೊಬ್ಬರು, 'ಹವಾಮಾನವು ತುಂಬಾ ಚಳಿಯಾಗಿದೆ.. ನಮ್ಮ ಕೈಗಳು ಹೆಪ್ಪುಗಟ್ಟಲು ಪ್ರಾರಂಭಿಸಿವೆ ಮತ್ತು ದಾಲ್ ಸರೋವರವು ಹೆಪ್ಪುಗಟ್ಟಿದೆ... ನಗರವು ಇಂತಹ ತಾಪಮಾನವನ್ನು ಅನುಭವಿಸುತ್ತಿರುವುದು ಇದೇ ಮೊದಲು. ಪ್ರಸ್ತುತ ತಾಪಮಾನದಿಂದಾಗಿ ನಗರದಲ್ಲಿ ಹಿಮಪಾತ ಸಂಭವಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
"ಇಲ್ಲಿ ಹಿಮಪಾತವಾಗುವ ಸಾಧ್ಯತೆ ತುಂಬಾ ಹೆಚ್ಚಾಗಿದೆ.. ಈಗ ತುಂಬಾ ತಂಪಾಗಿದೆ. ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಮತ್ತೋರ್ವ ನಿವಾಸಿ ಹೇಳಿದರು. ಇದೇ ವೇಳೆ ಡಿಸೆಂಬರ್ 24 ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ತೀವ್ರ ಶೀತ ಅಲೆ ಬೀಳುವ ಮುನ್ಸೂಚನೆಯನ್ನು ಐಎಂಡಿ ಎಚ್ಚರಿಕೆ ನೀಡಿದೆ.
ಚಳಿ ಹೆಚ್ಚಳದ ಬೆನ್ನಲ್ಲೇ ದಿಲ್ಲಿ ಮಾಲಿನ್ಯ ಮತ್ತೆ ಗಂಭೀರದ ಮಟ್ಟಕ್ಕೆ
ರಾಜಧಾನಿ ದೆಹಲಿಯಲ್ಲಿ ಚಳಿ ಮತ್ತು ಮಂಜು ಕವಿದ ವಾತಾವರಣ ಹೆಚ್ಚಿದ ಬೆನ್ನಲ್ಲೇ ವಾಯುಮಾಲಿನ್ಯ ಪ್ರಮಾಣ ಮತ್ತೆ ಗಂಭೀರಕ್ಕೆ ತಲುಪಿದೆ. ಭಾನುವಾರ ವಾಯುಗುಣಮಟ್ಟ ಸೂಚ್ಯಂಕ (ಎಕ್ಯುಐ) ಅತಿ ಕಳಪೆ ಎಂದು ಪರಿಗಣಿಸಲಾಗುವ 406 ಅಂಕಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಚಳಿಯೂ ವಿಪರೀತವಿದ್ದು, ಇಲ್ಲಿನ ಜನ ಪರದಾಡುವಂತಾಗಿದೆ. ಈ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ವಾಯು ಮಾಲಿನ್ಯಕ್ಕೆ ಕಾರಣವಾಗುವ ಕಟ್ಟಡ ನಿರ್ಮಾಣದಂತಹ ಕಾರ್ಯಗಳನ್ನು ನಿರ್ಬಂಧಿಸುವ ಗ್ರಾಪ್ -4 ಅನ್ನು ಈಗಾಗಲೇ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.