ಮುಜಾಫರ್‌ನಗರ: ಮುಜಾಫರ್‌ನಗರದ ಪಾಲ್ಡಿ ಗ್ರಾಮದಲ್ಲಿ ಮಂಗಳವಾರ ಕೆಲವು ವ್ಯಕ್ತಿಗಳು ದಲಿತ ಯುವಕನನ್ನು ಹೊಡೆದು ಕೊಂದಿದ್ದಾರೆ ಮತ್ತು ಆತನ ಸೋದರ ಸಂಬಂಧಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
20 ವರ್ಷದ ಸನ್ನಿ ಹತ್ಯೆಗೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ(ನಗರ) ಸತ್ಯನಾರಾಯಣ ಪ್ರಜಾಪತ್ ಅವರು ತಿಳಿಸಿದ್ದಾರೆ.
ಸನ್ನಿ ತನ್ನ ಸೋದರಸಂಬಂಧಿ ಶಿಲು ಜೊತೆ ಖತೌಲಿಯಿಂದ ತನ್ನ ಹಳ್ಳಿಗೆ ಮೋಟಾರ್‌ಸೈಕಲ್‌ನಲ್ಲಿ ಹಿಂದಿರುಗುತ್ತಿದ್ದ. ಈ ವೇಳೆ ಸನ್ನಿ ಮತ್ತು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಗ್ರಾಮದ ಮುಖಂಡನ ಮಗನ ನಡುವೆ ಜಗಳ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಗ್ವಾದ ತೀವ್ರಗೊಂಡಿದ್ದು, ಇಬ್ಬರು ದಲಿತ ಸಹೋದರರ ಮೇಲೆ ಆರೋಪಿಗಳು ಲಾಠಿ ಪ್ರಹಾರ ನಡೆಸಿದ್ದು, ಇದರಲ್ಲಿ ಸನ್ನಿ ಸಾವನ್ನಪ್ಪಿದ್ದಾರೆ ಮತ್ತು ಶಿಲು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಏತನ್ಮಧ್ಯೆ ಗ್ರಾಮದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.