ದೇಶ

ಒಂದು ದೇಶ, ಒಂದು ಚುನಾವಣೆ: ಸಾರ್ವಜನಿಕ ಸಲಹೆ ಕೇಳಿದ ಕೋವಿಂದ್ ಸಮಿತಿ

Srinivasamurthy VN

ನವದೆಹಲಿ: ಕೇಂದ್ರದ ಎನ್ ಡಿಎ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಒಂದು ದೇಶ, ಒಂದು ಚುನಾವಣೆ ಕುರಿತಂತೆ ನೇಮಕವಾಗಿರುವ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ಸಾರ್ವಜನಿಕರಿಂದ ಸಲಹೆ ಕೇಳಿದೆ.

ಹೌದು.. ಒಂದು ದೇಶ ಒಂದು ಚುನಾವಣೆ (One Nation, One Election) ಸಂಬಂಧ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಆಡಳಿತಾತ್ಮಕ ಚೌಕಟ್ಟಿನಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲು ಸಾರ್ವಜನಿಕರ ಸಲಹೆಯನ್ನು ಆಹ್ವಾನಿಸಲಾಗಿದೆ. ಒಂದು ದೇಶ ಒಂದು ಚುನಾವಣೆ ಸಂಬಂಧ ನೇಮಕವಾದ ಸಮಿತಿಯ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಸಿದ್ದು ಸಲಹೆ ನೀಡುವಂತೆ ಕೇಳಲಾಗಿದೆ. ಸಾರ್ವಜನಿಕರು ಜ.15 ರ ಒಳಗಡೆ ಸಲಹೆಯನ್ನು ಲಿಖಿತವಾಗಿ ಬರೆದು ಪೋಸ್ಟ್‌ ಮಾಡಬಹುದು ಅಥವಾ sc-hlc@gov.in ಗೆ ಇಮೇಲ್‌ ಮಾಡುವ ಮೂಲಕ ಅಭಿಪ್ರಾಯ ವ್ಯಕ್ತಪಡಿಸಬಹುದು.

ಈ ಬಗ್ಗೆ ಸಮಿತಿ ಜಾಹಿರಾತು ನೀಡಿದ್ದು, ಜನರು ನೀಡಿದ ಎಲ್ಲಾ ಸಲಹೆಯನ್ನು ಸಮಿತಿಯ ಮುಂದೆ ಇಡಲಾಗುತ್ತದೆ ಎಂದು ಜಾಹೀರಾತಿನಲ್ಲಿ ಉಲ್ಲೇಖಿಸಲಾಗಿದೆ. ಸಮಿತಿಯ ಉಲ್ಲೇಖದ ನಿಯಮಗಳ ವಿವರಗಳು ಮತ್ತು ತಜ್ಞರ ಸಂಸ್ಥೆಗಳ ವರದಿಗಳನ್ನು ವೆಬ್‌ಸೈಟ್‌ನಲ್ಲಿ ನೋಡಬಹುದು: www.onoe.gov.in/onoe-reports

ಮಾಜಿ ರಾಷ್ಟ್ರಪತಿ ಕೋವಿಂದ್ ನೇತೃತ್ವದಲ್ಲಿ ಸಮಿತಿ ರಚನೆ
ಹಲವಾರು ಅಚ್ಚರಿ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ ಒಂದು ರಾಷ್ಟ್ರ, ಒಂದು ಚುನಾವಣೆ ಪರಿಕಲ್ಪನೆಯ ಸಾಧಕ, ಬಾಧಕ ಅಧ್ಯಯನ ಮಾಡಿ ವರದಿಯನ್ನು ಸಲ್ಲಿಸಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ram Nath Kovind.) ನೇತೃತ್ವದಲ್ಲಿ ವಿಶೇಷ ಸಮಿತಿಯನ್ನು ರಚಿಸಿದೆ. ಸಮಿತಿಯಲ್ಲಿ ಗೃಹ ಸಚಿವ ಅಮಿತ್ ಶಾ, ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ರಾಜ್ಯಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಮತ್ತು ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎನ್‌ಕೆ ಸಿಂಗ್, ಲೋಕಸಭೆಯ ಮಾಜಿ ಕಾರ್ಯದರ್ಶಿ ಸುಭಾಷ್ ಸಿ ಕಶ್ಯಪ್, ಹಿರಿಯ ವಕೀಲ ಹರೀಶ್ ಸಾಳ್ವೆ ಮತ್ತು ಮಾಜಿ ಮುಖ್ಯ ವಿಜಿಲೆನ್ಸ್ ಕಮಿಷನರ್ ಸಂಜಯ್ ಕೊಠಾರಿ ಸದಸ್ಯರಾಗಿದ್ದಾರೆ.

SCROLL FOR NEXT