ದೇಶ

ಟಾಯ್ಲೆಟ್ ನಲ್ಲಿ ಸಿಲುಕಿ ಗಂಟೆಗಟ್ಟಲೆ ಪ್ರಯಾಣ: ಟಿಕೆಟ್ ಮೊತ್ತ ಮರುಪಾವತಿಗೆ ಮುಂದಾದ ಸ್ಪೈಸ್ ಜೆಟ್!

Vishwanath S

ನವದೆಹಲಿ: ಮುಂಬೈನಿಂದ ಬೆಂಗಳೂರಿಗೆ ಬಂದಿದ್ದ ಸ್ಪೈಸ್‌ಜೆಟ್ ವಿಮಾನದಲ್ಲಿ ಟಾಯ್ಲೆಟ್ ಬಾಗಿಲು ಅಸಮರ್ಪಕವಾಗಿದ್ದರಿಂದ ಪ್ರಯಾಣಿಕರೊಬ್ಬರು ಒಳಗೆ ಸಿಲುಕಿ ಪ್ರಯಾಣಿಸಿದ್ದ ಘಟನೆ ನಡೆದಿತ್ತು. ಇದೀಗ ಆ ಪ್ರಯಾಣಿಕನಿಗೆ ಸಂಪೂರ್ಣ ಟಿಕೆಟ್ ಮೊತ್ತವನ್ನು ಮರುಪಾವತಿ ಮಾಡಲಾಗುತ್ತಿದೆ ಎಂದು ಸ್ಪೈಸ್ ಜೆಟ್ ವಕ್ತಾರರು ತಿಳಿಸಿದ್ದಾರೆ.

ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ವಿಮಾನಯಾನ ಸಂಸ್ಥೆ ಕ್ಷಮೆಯಾಚಿಸಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆದ ನಂತರ ಇಂಜಿನಿಯರ್ ಶೌಚಾಲಯದ ಬಾಗಿಲು ತೆರೆದ ನಂತರ ಪ್ರಯಾಣಿಕರು ಹೊರಗೆ ಬಂದಿದ್ದರು. ಪ್ರಯಾಣಿಕರ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. 

'ಜನವರಿ 16ರಂದು ಮುಂಬೈನಿಂದ ಬೆಂಗಳೂರಿಗೆ ಬಂದಿದ್ದ ಸ್ಪೈಸ್‌ಜೆಟ್ ವಿಮಾನದ ಬಾಗಿಲಿನ ಲಾಕ್ ದೋಷದಿಂದಾಗಿ ಪ್ರಯಾಣಿಕರೊಬ್ಬರು ಸುಮಾರು ಒಂದು ಗಂಟೆಗಳ ಕಾಲ ಶೌಚಾಲಯದಲ್ಲಿ ಸಿಲುಕಿಕೊಂಡರು. ಈ ಸಮಯದಲ್ಲಿ ವಿಮಾನವು ಮುಂಬೈಯಿಂದ ಬೆಂಗಳೂರಿಗೆ ಸಂಚರಿಸುತ್ತಿತ್ತು ಎಂದು ವಕ್ತಾರರು ತಿಳಿಸಿದ್ದಾರೆ.

'ಪ್ರಯಾಣದ ಸಮಯದಲ್ಲಿ ನಮ್ಮ ಸಿಬ್ಬಂದಿ ಪ್ರಯಾಣಿಕರಿಗೆ ಸಹಾಯ ಮಾಡುವುದರಲ್ಲಿ ನಿರತರಾಗಿದ್ದರು. ವಿಮಾನ ಲ್ಯಾಂಡಿಂಗ್ ಆದ ನಂತರ, ಎಂಜಿನಿಯರ್ ಶೌಚಾಲಯದ ಬಾಗಿಲು ತೆರೆದರು. ತಕ್ಷಣ ಪ್ರಯಾಣಿಕರಿಗೆ ವೈದ್ಯಕೀಯ ಸಹಾಯವನ್ನು ಒದಗಿಸಲಾಯಿತು. ಪ್ರಯಾಣಿಕರಿಗೆ ಅವರ ಟಿಕೆಟ್‌ಗಾಗಿ ಸಂಪೂರ್ಣ ಹಣವನ್ನು ಹಿಂತಿರುಗಿಸಲಾಗುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಮತ್ತೊಂದೆಡೆ, ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ. DGCA ಅಧಿಕಾರಿಯ ಪ್ರಕಾರ, ಈ ಘಟನೆಯು ನಿರ್ವಹಣೆ ಸಮಸ್ಯೆ ಅಥವಾ ಇನ್ನಾವುದೇ ಕಾರಣದಿಂದ ಸಂಭವಿಸಿರಬಹುದು. ನಿಯಂತ್ರಕರು ಎಲ್ಲಾ ಸಾಧ್ಯತೆಗಳನ್ನು ತನಿಖೆ ಮಾಡಲಿದ್ದಾರೆ.

SCROLL FOR NEXT