ಮುಂಬೈ: ಅಡ್ಡ ಮತದಾನದ ಬೆದರಿಕೆಯ ನಡುವೆಯೇ ಮಹಾರಾಷ್ಟ್ರ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ ಎಲ್ಲಾ 9 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಮಹಾ ವಿಕಾಸ್ ಅಘಾಡಿಯಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ನ ಪ್ರದ್ನ್ಯಾ ಸತವ್ ಅವರ ಗೆಲುವಿನೊಂದಿಗೆ ಕಾಂಗ್ರೆಸ್ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಮಿಲಿಂದ್ ನಾರ್ವೇಕರ್ ಮತ್ತು ಜಯಂತ್ ಪಾಟೀಲ್ ಸ್ಪರ್ಧಿಸಿರುವ ಒಂದು ಕ್ಷೇತ್ರದಲ್ಲಿ ಇನ್ನೂ ಮತ ಎಣಿಕೆ ಮುಗಿದಿಲ್ಲ.
ರಾಜ್ಯ ವಿಧಾನಮಂಡಲದ ಮೇಲ್ಮನೆಗೆ ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಜೆ 5 ಗಂಟೆಯ ನಂತರ ಮತ ಎಣಿಕೆ ಕಾರ್ಯ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ವಿಧಾನಸಭೆಯ ಮೇಲ್ಮನೆಯ 11 ಸದಸ್ಯರು ಜುಲೈ 27 ರಂದು ನಿವೃತ್ತರಾಗುತ್ತಿದ್ದು, ತೆರವಾದ ಸ್ಥಾನಗಳಿಗೆ ಚುನಾವಣೆ ನಡೆದಿದೆ.
ಬಿಜೆಪಿ ಐದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಅದರ ಮಹಾಯುತಿ ಮಿತ್ರಪಕ್ಷಗಳಾದ ಶಿವಸೇನಾ ಮತ್ತು ಎನ್‌ಸಿಪಿ ತಲಾ ಇಬ್ಬರು ಅಭ್ಯರ್ಥಿಗಳನ್ನು ನಾಮನಿರ್ದೇಶನಗೊಳಿಸಿದ್ದವು. ಮತ್ತೊಂದೆಡೆ, ಕಾಂಗ್ರೆಸ್ ಮತ್ತು ಶಿವಸೇನಾ(ಯುಬಿಟಿ) ತಲಾ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿತು. ಅವರ ಎಂವಿಎ ಪಾಲುದಾರ ಎನ್‌ಸಿಪಿ (ಎಸ್‌ಪಿ), ರೈತ ಮತ್ತು ಕಾರ್ಮಿಕರ ಪಕ್ಷ (ಪಿಡಬ್ಲ್ಯೂಪಿ) ನಾಮನಿರ್ದೇಶಿತರನ್ನು ಬೆಂಬಲಿಸಿದೆ. ಆದರೆ, ಪಿಡಬ್ಲ್ಯುಪಿ ಅಭ್ಯರ್ಥಿ ಜಯಂತ್ ಪಾಟೀಲ್ ಅವರು ವಿಧಾನ ಪರಿಷತ್ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ.