ಗುವಾಹಟಿ: ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಮಣಿಪುರದ ಎನ್ ಕೋಟೀಶ್ವರ್ ಸಿಂಗ್ ಅವರು ಮಂಗಳವಾರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದು, ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ನ್ಯಾ. ಎನ್ ಕೋಟೀಶ್ವರ್ ಸಿಂಗ್ ಅವರು ಮಣಿಪುರದಿಂದ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡ ಮೊದಲ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ತಂದೆ ಎನ್ ಇಬೊಟೊಂಬಿ ಸಿಂಗ್ ಅವರು ಗುವಾಹಟಿ ಹೈಕೋರ್ಟ್ ಮಾಜಿ ನ್ಯಾಯಾಧೀಶರಾಗಿದ್ದು, ಮಣಿಪುರದ ಮೊದಲ ಅಡ್ವೊಕೇಟ್ ಜನರಲ್ ಆಗಿದ್ದರು.
ಮಾರ್ಚ್ 1, 1963 ರಂದು ಜನಿಸಿದ ಸಿಂಗ್ ಅವರು, ಪುರುಲಿಯ ರಾಮಕೃಷ್ಣ ಮಿಷನ್ ವಿದ್ಯಾಪೀಠದಲ್ಲಿ ಶಾಲಾ ಶಿಕ್ಷಣ ಪಡೆದರು ಮತ್ತು 1983 ರಲ್ಲಿ ಕಿರೋರಿ ಮಾಲ್ ಕಾಲೇಜಿನಲ್ಲಿ ಪದವಿ ಪಡೆದರು. 1986 ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ LL.B ಪಡೆದಿದ್ದಾರೆ .
ಸಿಂಗ್ ಅವರನ್ನು ಅಕ್ಟೋಬರ್ 17, 2011 ರಂದು ಗೌಹಾಟಿ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಿಸಲಾಯಿತು. 2013 ರಲ್ಲಿ ಮಣಿಪುರದ ಹೈಕೋರ್ಟ್ ರಚನೆಯಾದ ನಂತರ, ಅವರನ್ನು ನ್ಯಾಯಾಧೀಶರಾಗಿ ಆ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. ಗೌಹಾಟಿ ಹೈಕೋರ್ಟ್ ಮತ್ತು ಮಣಿಪುರ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕ್ರಮವಾಗಿ ಮೂರು ಮತ್ತು ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ.
ಕೋಟೀಶ್ವರ್ ಸಿಂಗ್ ಅವರನ್ನು ಫೆಬ್ರವರಿ 2023 ರಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು.
ಸಿಂಗ್ ಅವರನ್ನು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕ ಮಾಡಿರುವುದು ಈಶಾನ್ಯ ರಾಜ್ಯಗಳಿಗೆ ಪ್ರಾತಿನಿಧ್ಯ ನೀಡಿದಂತಾಗಿದೆ ಎಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ಹೇಳಿದೆ.