ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಯುವ ನಾಯಕನನ್ನು ಬುಧವಾರ ರಾತ್ರಿ ಇರಿದು ಹತ್ಯೆ ಮಾಡಲಾಗಿದೆ. ಪಳನಾಡು ಜಿಲ್ಲೆಯಲ್ಲಿ ರಸ್ತೆ ಮಧ್ಯೆಯೇ ದಾಳಿಕೋರರು ಈ ಕೃತ್ಯ ಎಸಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿದೆ. ಯುವ ಮುಖಂಡನ ಮೇಲೆ ಚಾಕುವಿನಿಂದ ಹಲ್ಲೆ ನಡೆಸುತ್ತಿದ್ದರೆ ಜನರು ಮಾತ್ರ ನೋಡುತ್ತಾ ನಿಂತಿದ್ದಾರೆ.
ಕೊಲೆಯಾದ ಯುವ ಮುಖಂಡನನ್ನು ರಶೀದ್ ಎಂದು ಗುರುತಿಸಲಾಗಿದೆ. ದಾಳಿಯ ನಂತರ ರಶೀದ್ ರಕ್ತದ ಮಡುವಿನಲ್ಲಿ ನೆಲದ ಮೇಲೆ ಬಿದ್ದಿದ್ದನು. ಎರಡೂ ಕೈಗಳಿಗೂ ಮಾರಣಾಂತಿಕ ಗಾಯವಾಗಿದ್ದು ಕುತ್ತಿಗೆಯ ಮೇಲೆ ಆಳವಾದ ಇರಿತವಾಗಿದೆ ಎಂದು ಮೂಲಗಳು ತಿಳಿಸಿವೆ. ರಶೀದ್ ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಕೊಲೆ ಪ್ರಕರಣ ಸಂಬಂಧ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪಾಲನಾಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಂಚಿ ಶ್ರೀನಿವಾಸ ರಾವ್ ಅವರು, ಪ್ರಸ್ತುತ ವೈಯಕ್ತಿಕ ದ್ವೇಷವೇ ಈ ಕೊಲೆಗೆ ಕಾರಣ ಇರಬಹುದು. ಈ ಘಟನೆಯಲ್ಲಿ ಯಾವುದೇ ಪಕ್ಷಕ್ಕೆ ಸಂಬಂಧವಿಲ್ಲ ಎಂದರು. ಇದು ಪರಸ್ಪರ ಪೈಪೋಟಿಯ ವಿಷಯವಾಗಿದೆ ಎಂದರು.
ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರದಂತೆ ನಿರ್ಬಂಧ ಹೇರಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನತೆ ಉಂಟುಮಾಡುವ ಅಥವಾ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ವಿಚಾರದಲ್ಲಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದರು.