ಪುಣೆ: ವಿವಾದಾತ್ಮಕ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ಅಕ್ರಮವಾಗಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಒಬಿಸಿ ನಾನ್-ಕ್ರೀಮಿ ಲೇಯರ್ ಪ್ರಯೋಜನೆ ಪಡೆದಿದ್ದಾರೆ ಎಂಬ ಆರೋಪದ ನಡುವೆ ಅವರ ಪೋಷಕರ ವೈವಾಹಿಕ ಸ್ಥಿತಿಯ ಬಗ್ಗೆ ಮಾಹಿತಿ ನೀಡುವಂತೆ ಪುಣೆ ಪೊಲೀಸರಿಗೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಪಿಟಿಐ ಜೊತೆ ಮಾತನಾಡಿದ ಪುಣೆ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು, ಪೂಜಾ ಖೇಡ್ಕರ್ ಅವರ ಪೋಷಕರು - ತಾಯಿ ಮನೋರಮಾ ಮತ್ತು ತಂದೆ ದಿಲೀಪ್ ಅವರು ವಿಚ್ಛೇದನ ಪಡೆದಿದ್ದಾರೆಯೇ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರ ಕೇಳಿದೆ ಎಂದು ದೃಢಪಡಿಸಿದರು.
"ಪೂಜಾ ಖೇಡ್ಕರ್ ಅವರ ಪೋಷಕರು ವಿಚ್ಛೇದನ ಪಡೆದಿದ್ದಾರೆಯೇ ಎಂಬುದರ ಕುರಿತು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡುವಂತೆ ನಮಗೆ ತಿಳಿಸಲಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಅವರ ಮದುವೆ/ವಿಚ್ಛೇದನದ ನೈಜ ಸ್ಥಿತಿಯನ್ನು ಪರಿಶೀಲಿಸಲು ನಮಗೆ ಸೂಚಿಸಲಾಗಿದೆ" ಎಂದು ಅಧಿಕಾರಿ ಹೇಳಿದ್ದಾರೆ.
ಭಾರತೀಯ ಆಡಳಿತ ಸೇವೆಗೆ ಸೇರಲು ಅಂಗವೈಕಲ್ಯ ಮತ್ತು ಒಬಿಸಿ ಕೋಟಾ ದುರ್ಬಳಕೆ ಮಾಡಿಕೊಂಡ ಆರೋಪದ ನಡುವೆ ಪುಣೆಯಿಂದ ವಾಶಿಮ್‌ಗೆ ವರ್ಗಾವಣೆಗೊಂಡ ಖೇಡ್ಕರ್ ಅವರ ಪ್ರೊಬೇಷನರಿ ಅವಧಿಯನ್ನು ಸ್ಥಗಿತಗೊಳಿಸಲಾಗಿದ್ದು, ವಾಪಸ್ ಅಕಾಡೆಮಿಗೆ ಮರಳುವಂತೆ ಸೂಚಿಸಲಾಗಿದೆ. ಅಲ್ಲದೆ ಅವರ ವಿರುದ್ಧ ತನಿಖೆಗೆ ಕೇಂದ್ರ ಸರ್ಕಾರ ಏಕ ಸದಸ್ಯ ಸಮಿತಿ ಸಹ ರಚಿಸಿದೆ.