ನವದೆಹಲಿ: ಲೋಕಸಭಾ ಚುನಾವಣೆ 2024 ರ ಫಲಿತಾಂಶ (Loksabha Election results-2024) ಪ್ರಕಟಗೊಂಡಿದ್ದು, ಸತತ ಮೂರನೇ ಬಾರಿಗೆ ಸತಂತ್ರವಾಗಿ ಸರ್ಕಾರ ರಚನೆ ಮಾಡುವ ಬಿಜೆಪಿಯ ಕನಸು ಭಗ್ನವಾಗಿದೆ. ಆದರೆ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ 293 ಸ್ಥಾನಗಳನ್ನು ಪಡೆದುಕೊಂಡಿದ್ದು, ಸರಳ ಬಹುಮತ ಪಡೆದಿದೆ.
ಈ ವರೆಗೂ 542 ಸ್ಥಾನಗಳ ಫಲಿತಾಂಶಗಳು ಪ್ರಕಟಗೊಂಡಿದ್ದರೆ, ಒಂದು ಸ್ಥಾನದಲ್ಲಿ ಶರದ್ ಪವಾರ್ ನೇತೃತ್ವದ ಎನ್ ಸಿಪಿಯ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.
ಚುನಾವಣಾ ಆಯೋಗದ ವೆಬ್ ಸೈಟ್ ನೀಡಿರುವ ಮಾಹಿತಿಯ ಪ್ರಕಾರ, ಬಿಜೆಪಿ 240 ಸ್ಥಾನಗಳಲ್ಲಿ ಗೆದ್ದಿದ್ದರೆ, ಕಾಂಗ್ರೆಸ್ 99 ಸ್ಥಾನಗಳನ್ನು ಪಡೆದಿದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ 37 ಸ್ಥಾನಗಳನ್ನು ಪಡೆದಿದೆ.
INDIA ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಪಕ್ಷ 29 ಸ್ಥಾನಗಳಲ್ಲಿ ಗೆದ್ದಿದೆ. ಇನ್ನು ಎನ್ ಡಿಎ ಮಿತ್ರಕೂಟದಲ್ಲಿರುವ ಟಿಡಿಪಿ 16 ಸ್ಥಾನಗಳು ಹಾಗೂ ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು 12 ಸ್ಥಾನಗಳನ್ನು ಗೆಲ್ಲುವ ಮೂಲಕ ಎನ್ ಡಿಎ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಶಿವಸೇನೆ (ಶಿಂಧೆ ಬಣ) 7 ಸ್ಥಾನಗಳನ್ನು ಗೆದ್ದಿದ್ದರೆ, ಬಿಹಾರದಲ್ಲಿ ಎಲ್ ಜೆಪಿ (ರಾಮ್ ವಿಲಾಸ್ ಪಾಸ್ವಾನ್) 5, ಜೆಡಿಎಸ್ ಹಾಗೂ ಆರ್ ಎಲ್ ಡಿ ತಲಾ 2, ಸ್ಥಾನಗಳನ್ನು ಗೆದ್ದಿವೆ. ಉಳಿದಂತೆ ಎನ್ ಡಿಎ ಮಿತ್ರಪಕ್ಷಗಳಾದ ಜನಸೇನಾ, ಎನ್ ಸಿಪಿ (ಅಜಿತ್ ಪವಾರ್ ಬಣ) ಯುಪಿಪಿಎಲ್, ಎಜೆಎಸ್ ಯು, ಹೆಚ್ಎಎಂಎಸ್, ಎಸ್ ಕೆಎಂ ಹಾಗೂ ಅಪ್ನಾ ದಲ್ (ಸೋನ್ ಲಾಲ್) ತಲಾ 1 ಸ್ಥಾನ ಗೆದ್ದಿದೆ.