ಅಮರಾವತಿ: ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ತಮ್ಮ ಪಕ್ಷ ಎನ್‌ಡಿಎಯಲ್ಲಿದ್ದು, ಇಂದು ಸಂಜೆ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (NDA) ಸಭೆಯಲ್ಲಿ ಭಾಗವಹಿಸಲು ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.
ಆಂಧ್ರಪ್ರದೇಶ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಜಯಭೇರಿ ಬಾರಿಸಿದ ನಂತರ ದೆಹಲಿಯಲ್ಲಿ ಇಂದು ಸಂಜೆ ಸಭೆ ನಡೆಯಲಿದ್ದು ಅದರಲ್ಲಿ ಭಾಗವಹಿಸಲು ಪ್ರಯಾಣ ಬೆಳೆಸುವ ಮುನ್ನ ಅಮರಾವತಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಎನ್‌ಡಿಎ ಘಟಕದ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಸಹ ಇಂದು ದೆಹಲಿಗೆ ತೆರಳುತ್ತಿದ್ದಾರೆ.
ನಾವು ಎನ್‌ಡಿಎ ಮೈತ್ರಿಕೂಟದಲ್ಲಿದ್ದೇವೆ. ನಾನು ಎನ್‌ಡಿಎ ಸಭೆಗೆ ಹೋಗುತ್ತಿದ್ದೇನೆ. ಕಾಲಾನಂತರದಲ್ಲಿ, ಏನಾದರೂ ಇದ್ದರೆ ನಿಮಗೆ ತಿಳಿಸುತ್ತೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪವವ್ ಕಲ್ಯಾಣ್ ಕೂಡ ಎನ್‌ಡಿಎ ಸಭೆಯಲ್ಲಿ ಪಾಲ್ಗೊಳ್ಳಲು ರಾಷ್ಟ್ರ ರಾಜಧಾನಿಗೆ ತೆರಳಿದ್ದಾರೆ ಎಂದು ಜನಸೇನಾ ಮೂಲಗಳು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿವೆ.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಹಿರಿಯ ನಾಯಕರು ಇಂದು ದೆಹಲಿಯಲ್ಲಿ ಸಭೆ ನಡೆಸುತ್ತಿದ್ದು, ಲೋಕಸಭೆ ಚುನಾವಣೆ ಫಲಿತಾಂಶಗಳ ಅವಲೋಕನ ಮತ್ತು ಸರ್ಕಾರ ರಚನೆಯ ವಿವರಗಳ ಕುರಿತು ಚರ್ಚಿಸುತ್ತಿದ್ದಾರೆ.
ಆಂಧ್ರಪ್ರದೇಶದಿಂದ ಕ್ರಮವಾಗಿ 16 ಮತ್ತು ಎರಡು ಲೋಕಸಭಾ ಸ್ಥಾನಗಳನ್ನು ಗೆದ್ದಿರುವ ಟಿಡಿಪಿ ಮತ್ತು ಜನಸೇನಾ ಕೇಂದ್ರದಲ್ಲಿ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ರಾಜ್ಯದಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಗೆದ್ದಿದೆ.
ಕಳೆದ ಐದು ವರ್ಷಗಳಲ್ಲಿ ಆಂಧ್ರಪ್ರದೇಶ ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಅದನ್ನು ಸರಿಪಡಿಸುವ ಕೆಲಸ ನಮ್ಮ ಮೇಲಿದೆ. ರಾಜ್ಯದಲ್ಲಿ ವ್ಯವಸ್ಥೆಗಳು ನಾಶವಾಗಿ ಆರ್ಥಿಕತೆ ಕುಸಿದಿದ್ದು, ಕಳೆದ ಐದು ವರ್ಷಗಳಲ್ಲಿ ಉಂಟಾದ ವಿನಾಶ ಅಪಾರವಾಗಿದೆ ಎಂದು ಆರೋಪಿಸಿದರು.
ರಾಜಕೀಯದಲ್ಲಿ ಯಾರೂ ಶಾಶ್ವತರಲ್ಲ, ಏರಿಳಿತಗಳಿರುತ್ತವೆ, ದೇಶ ಶಾಶ್ವತ, ಪ್ರಜಾಪ್ರಭುತ್ವ ಶಾಶ್ವತ, ರಾಜಕೀಯ ಪಕ್ಷಗಳು ಶಾಶ್ವತ, ಆದರೆ ಅಧಿಕಾರ ಶಾಶ್ವತವಲ್ಲ ಎಂದರು.
25 ಲೋಕಸಭಾ ಸ್ಥಾನಗಳ ಪೈಕಿ ಆಂಧ್ರ ಪ್ರದೇಶದಲ್ಲಿ ಎನ್‌ಡಿಎ 21 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ವೈಎಸ್‌ಆರ್‌ಸಿಪಿ ಕೇವಲ ನಾಲ್ಕು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ 135, ಜನಸೇನಾ - 21 ಮತ್ತು ಬಿಜೆಪಿ - 8. ವೈಎಸ್‌ಆರ್‌ಸಿಪಿ 11 ಸ್ಥಾನಗಳನ್ನು ಪಡೆದುಕೊಂಡಿದೆ.