ನವದೆಹಲಿ: ನರೇಂದ್ರ ಮೋದಿ ಅವರು ಭಾನುವಾರ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಮೋದಿ ಸೇರಿದಂತೆ ಏಳು ಮಾಜಿ ಮುಖ್ಯಮಂತ್ರಿಗಳು ಇಂದು ಪ್ರಮಾಣ ವಚನ ಸ್ವೀಕರಿಸುವ ಮೂಲಕ ನೂತನ ಕೇಂದ್ರ ಸಚಿವ ಸಂಪುಟದ ಭಾಗವಾಗಿದ್ದಾರೆ.
ಇತರ ಆರು ಮಾಜಿ ಮುಖ್ಯಮಂತ್ರಿಗಳೆಂದರೆ ಎಚ್ ಡಿ ಕುಮಾರಸ್ವಾಮಿ (ಕರ್ನಾಟಕ), ಶಿವರಾಜ್ ಸಿಂಗ್ ಚೌಹಾಣ್(ಮಧ್ಯಪ್ರದೇಶ), ರಾಜನಾಥ್ ಸಿಂಗ್(ಉತ್ತರ ಪ್ರದೇಶ), ಮನೋಹರ್ ಲಾಲ್ ಖಟ್ಟರ್(ಹರಿಯಾಣ), ಸರ್ಬಾನಂದ ಸೋನೋವಾಲ್(ಅಸ್ಸಾಂ) ಮತ್ತು ಜಿತನ್ ರಾಮ್ ಮಾಂಝಿ(ಬಿಹಾರ) ಅವರು ಇಂದು ಕೇಂದ್ರ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಈ ಪೈಕಿ ಐವರು ಮಾಜಿ ಮುಖ್ಯಮಂತ್ರಿಗಳು ಭಾರತೀಯ ಜನತಾ ಪಕ್ಷದವರಾಗಿದ್ದು, ಕುಮಾರಸ್ವಾಮಿ ಮತ್ತು ಮಾಂಝಿ ಬಿಜೆಪಿಯ ಮಿತ್ರಪಕ್ಷಗಳಾದ ಜನತಾ ದಳ-ಸೆಕ್ಯುಲರ್ ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾವನ್ನು ಪ್ರತಿನಿಧಿಸುತ್ತಾರೆ.
ಎರಡು ಪೂರ್ಣ ಅವಧಿಯ ನಂತರ ಕೇಂದ್ರದಲ್ಲಿ ಹೊಸ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಈ ಬಾರಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲವಾಗಿದೆ.