ನವದೆಹಲಿ: ಮೂರನೇ ಅವಧಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇಳೆ ರಾಷ್ಟ್ರಪತಿ ಭವನದಲ್ಲಿ ನಿಗೂಢ ಪ್ರಾಣಿಯೊಂದು ಅಡ್ಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅದನ್ನು ಚಿರತೆ ಎಂದು ಕರೆದಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭದ ನೇರ ಪ್ರಸಾರದ ವಿಡಿಯೋದಲ್ಲಿ, ಬಿಜೆಪಿ ಸಂಸದ ದುರ್ಗಾ ದಾಸ್ ಉಯಿಕೆ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅಭಿನಂದನೆ ಸ್ವೀಕರಿಸುವಾಗ, ಹಿಂಭಾಗದ ಮೆಟ್ಟಿಲಿನ ಮೇಲೆ ಪ್ರಾಣಿಯೊಂದು ನಡೆದುಕೊಂಡು ಹೋಗಿದೆ. ಇದರ ವಿಡಿಯೋ ವೈರಲ್ ಆಗಿದೆ. ಆ ಪ್ರಾಣಿ ಬೆಕ್ಕಿನ ರೀತಿ ಕಂಡುಬಂದರೂ, ಅದರ ಗಾತ್ರವು ಅನುಮಾನಕ್ಕೆ ಕಾರಣವಾಗಿತ್ತು. ಕೆಲವರು ಇದು ಚಿರತೆ ಇರಬಹುದು ಎಂದು ಶಂಕಿಸಿದ್ದರು.
ಅಂತಿಮವಾಗಿ ದೆಹಲಿ ಪೊಲೀಸರು ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ಇದು ಕೇವಲ ಬೆಕ್ಕು ಮತ್ತು ಯಾವುದೇ ಚಿರತೆ ಅಲ್ಲ ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದರು.
ನಿನ್ನೆ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನೇರ ಪ್ರಸಾರದ ವೇಳೆ ಸೆರೆಯಾದ ಪ್ರಾಣಿಯ ಚಿತ್ರವನ್ನು ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಚಿರತೆ ಎಂದು ತೋರಿಸುತ್ತಿವೆ. ಆದರೆ ಇದು ನಿಜವಲ್ಲ, ಕ್ಯಾಮೆರಾದಲ್ಲಿ ಸೆರೆಯಾದ ಪ್ರಾಣಿ ಸಾಮಾನ್ಯ ಮನೆಯ ಬೆಕ್ಕು, ದಯವಿಟ್ಟು ಇಂತಹ ಕ್ಷುಲ್ಲಕ ವದಂತಿಗಳಿಗೆ ಕಿವಿಗೋಡಬೇಡಿ" ಎಂದು ದೆಹಲಿ ಪೊಲೀಸರು 'X' ನಲ್ಲಿ ಪೋಸ್ಟ್ ಮಾಡಿದ್ದಾರೆ.