ನವದೆಹಲಿ: ಹರಿಯಾಣದಿಂದ ದಿನಕ್ಕೆ 100 ಮಿಲಿಯನ್ ಗ್ಯಾಲನ್ ನೀರು ಪಡೆಯುವ ಬೇಡಿಕೆಗೆ ಆಗ್ರಹಿಸಿ ರಾಜಧಾನಿ ದೆಹಲಿಯ ಜಲಸಮಸ್ಯೆಯನ್ನು ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆಗೆ ಒತ್ತಾಯಿಸಿ ದೆಹಲಿಯ ಜಲ ಸಚಿವೆ ಅತಿಶಿ ತಮ್ಮ ಸಂಗಡಿಗರೊಂದಿಗೆ ದೆಹಲಿಯಲ್ಲಿ ಇಂದು ಶುಕ್ರವಾರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು ಅದಕ್ಕೆ ಮುನ್ನ ರಾಜಘಾಟ್ ಗೆ ತೆರಳಿ ಮಹಾತ್ಮಾ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಿದರು.
ಅವರೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ, ಆಪ್ ನಾಯಕರಾದ ಸೌರಭ್ ಭಾರದ್ವಾಜ್ ಮತ್ತು ಸಂಜಯ್ ಸಿಂಗ್ ಇದ್ದರು. ಇದಕ್ಕೂ ಮೊದಲು, ಎಕ್ಸ್‌ನಲ್ಲಿನ ಪೋಸ್ಟ್ ಮಾಡಿದ ಸಚಿವೆ ಆತಿಶಿ, ದಕ್ಷಿಣ ದೆಹಲಿಯ ಭೋಗಲ್‌ನಲ್ಲಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸುವುದಾಗಿ ತಿಳಿಸಿದ್ದರು. ಸರ್ಕಾರದ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಹರಿಯಾಣ ಸರ್ಕಾರವು ದೆಹಲಿಯ ನೀರಿನ ಸಂಪೂರ್ಣ ಪಾಲನ್ನು ಬಿಡುಗಡೆ ಮಾಡುತ್ತಿಲ್ಲ ಎಂದರು.
ನಾನು ಇಂದಿನಿಂದ 'ಪಾನಿ ಸತ್ಯಾಗ್ರಹ'ವನ್ನು ಪ್ರಾರಂಭಿಸುತ್ತೇನೆ... ದೆಹಲಿಯ ಜನರು ಹರಿಯಾಣದಿಂದ ತಮ್ಮ ನ್ಯಾಯಯುತ ನೀರಿನ ಪಾಲನ್ನು ಪಡೆಯುವವರೆಗೆ ನಾನು 12 ಗಂಟೆಯಿಂದ ಭೋಗಲ್, ಜಂಗ್‌ಪುರದಲ್ಲಿ ಅನಿರ್ದಿಷ್ಟಾವಧಿ ಉಪವಾಸವನ್ನು ಪ್ರಾರಂಭಿಸುತ್ತೇನೆ ಎಂದು ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದರು.
ಕಳೆದ ಎರಡು ವಾರಗಳಿಂದ ಹರಿಯಾಣ 613 MGD ಯ ಬದಲಾಗಿ ದೆಹಲಿಗೆ ದಿನಕ್ಕೆ 100 ಮಿಲಿಯನ್ ಗ್ಯಾಲನ್ ಕಡಿಮೆ ನೀರನ್ನು ಬಿಡುಗಡೆ ಮಾಡುತ್ತಿದೆ ಎಂದು ಸಚಿವೆ ಹೇಳಿಕೊಂಡಿದ್ದಾರೆ, ಇದರ ಪರಿಣಾಮವಾಗಿ ದೆಹಲಿಯಲ್ಲಿ 28 ಲಕ್ಷ ಜನರು ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಇದರ ಜೊತೆಗೆ ದೆಹಲಿಯಲ್ಲಿ ಬಿಸಿಲಿನ ಸಮಸ್ಯೆ ಕೂಡ ವಿಪರೀತವಾಗಿದ್ದು ಅನೇಕರು ಅಸುನೀಗಿದ್ದಾರೆ.