ಸಿವಾನ್: ಬಿಹಾರದಲ್ಲಿ ಶನಿವಾರ ಮತ್ತೊಂದು ಸೇತುವೆ ಕುಸಿದಿದ್ದು, ಒಂದು ವಾರದೊಳಗೆ ನಡೆದ ಎರಡನೇ ಘಟನೆ ಇದಾಗಿದೆ. ಸಿವಾನ್ ಜಿಲ್ಲೆಯಲ್ಲಿ ಶನಿವಾರ ಸಣ್ಣ ಸೇತುವೆ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾರಾವುಂಡಾ ಮತ್ತು ಮಹಾರಾಜ್‌ಗಂಜ್ ಬ್ಲಾಕ್‌ಗಳ ಹಳ್ಳಿಗಳನ್ನು ಸಂಪರ್ಕಿಸುವ ಕಾಲುವೆಯ ಮೇಲೆ ನಿರ್ಮಿಸಲಾಗಿದ್ದ ಸೇತುವೆ ಇಂದು ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ಕುಸಿದಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಕುಲ್ ಕುಮಾರ್ ಗುಪ್ತಾ ಹೇಳಿದ್ದಾರೆ.
"ಘಟನೆಯಲ್ಲಿ ಯಾರಿಗೂ ಯಾವುದೇ ಗಾಯವಾಗಿಲ್ಲ. ಇದು ತುಂಬಾ ಹಳೆಯ ಸೇತುವೆಯಾಗಿದ್ದು, ಮೇಲ್ನೋಟಕ್ಕೆ, ಕಾಲುವೆಯ ಮೂಲಕ ನೀರು ಬಿಡುವಾಗ ಪಿಲ್ಲರ್‌ಗಳು ಕುಸಿದಿವೆ. ಅದನ್ನು ಪುನಃಸ್ಥಾಪಿಸುವವರೆಗೆ, ಆ ಪ್ರದೇಶದ ಹಳ್ಳಿಗಳ ನಿವಾಸಿಗಳಿಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದ್ದೇವೆ" ಡಿಎಂ ಪಿಟಿಐಗೆ ತಿಳಿಸಿದ್ದಾರೆ.
1991ರಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲಿ 20 ಅಡಿ ಉದ್ದದ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ತನಿಖಾ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾರಾಜಗಂಜ್ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅನಿಲ್ ಕುಮಾರ್ ಅವರು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಮಂಗಳವಾರ, ಅರಾರಿಯಾ ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಿಸಲಾದ ಸುಮಾರು 180 ಮೀಟರ್ ಉದ್ದದ ಸೇತುವೆ ಕುಸಿದು ಬಿದ್ದಿತ್ತು. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಇಲಾಖಾ ಕ್ರಮ ತೆಗೆದುಕೊಳ್ಳುವಂತೆ ಗ್ರಾಮೀಣ ಕಾಮಗಾರಿ ಇಲಾಖೆಗೆ ಸೂಚಿಸಲಾಗಿದೆ.