ನವದೆಹಲಿ: 18ನೇ ಲೋಕಸಭೆ ಅಧಿವೇಶನದಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ತೃಣಮೂಲ ಕಾಂಗ್ರೆಸ್ ಸಂಸದ ಯೂಸುಫ್ ಪಠಾಣ್ ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕಡು ನೀಲಿ ಬಣ್ಣದ ಬಟ್ಟೆ ಧರಿಸಿದ್ದ ಯೂಸುಫ್ ಪಠಾಣ್ ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಅವರು 'ಜೈ ಹಿಂದ್, ಜೈ ಬಾಂಗ್ಲಾ ಮತ್ತು ಜೈ ಗುಜರಾತ್' ಎಂದು ಹೇಳಿದ್ದು ನಂತರ ಸ್ಪೀಕರ್ ಭರ್ತ್ರಿಹರಿ ಮಹತಾಬ್ ಅವರೊಂದಿಗೆ ಹಸ್ತಲಾಘವ ಮಾಡಿದರು.
ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬಹರಂಪುರ್ ಕ್ಷೇತ್ರವನ್ನು ಗೆದ್ದಿದ್ದರು. ಇದು ಭಾರತದ ರಾಜಕೀಯದಲ್ಲಿ ಅವರ ಮೊದಲ ಅವಧಿಯಾಗಿದೆ.
ಟಿಎಂಸಿ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಪಠಾಣ್ ಅವರು, 25 ವರ್ಷಗಳಲ್ಲಿ ಸೋಲು ಕಂಡಿರದ ಹಿರಿಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿಗೆ ಸೋಲಿನ ರುಚಿ ತೋರಿಸಿದರು.