ಹೈದರಾಬಾದ್: ಶಾದ್‌ನಗರದಲ್ಲಿರುವ ಸೌತ್ ಗ್ಲಾಸ್ ಖಾಸಗಿ ಕಂಪನಿಯಲ್ಲಿ ಕಂಪ್ರೆಸರ್ ಸ್ಫೋಟದಿಂದಾಗಿ ಭಾರಿ ಅಪಘಾತ ಸಂಭವಿಸಿದೆ. ಈ ಅವಘಡದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ.
ರಂಗಾರೆಡ್ಡಿ ಜಿಲ್ಲೆಯ ಶಾದ್‌ನಗರದ ಬರ್ಗುಲಾ ಗ್ರಾಮದ ಹೊರವಲಯದಲ್ಲಿರುವ ಸೌತ್ ಗ್ಲಾಸ್ ಖಾಸಗಿ ಕಂಪನಿಯಲ್ಲಿ ಈ ದುರ್ಘಟನೆ ನಡೆದಿದೆ. ಗ್ಯಾಸ್ ಕಂಪ್ರೆಸರ್ ಸ್ಫೋಟದಲ್ಲಿ 15 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಈ ಸ್ಫೋಟವು ಎಷ್ಟು ಜೋರಾಗಿತ್ತೆಂದರೆ ಅದರ ಶಬ್ದವು ಹಲವಾರು ಕಿಲೋಮೀಟರ್ ದೂರಕ್ಕೆ ಕೇಳಿಸಿತು. ಸ್ಫೋಟದ ತೀವ್ರತೆಗೆ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಘಟನೆಯ ನಂತರ, ಗಾಯಗೊಂಡ ಕಾರ್ಮಿಕರನ್ನು ಚಿಕಿತ್ಸೆಗಾಗಿ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಸಿಎಫ್‌ಎಸ್‌ಎಲ್ ತಂಡ ಸ್ಥಳಕ್ಕೆ ಧಾವಿಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತನಿಖೆ ನಡೆಸುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಆಡಳಿತವು ಕಟ್ಟೆಚ್ಚರ ವಹಿಸಿದೆ.
ಶಾದ್‌ನಗರದ ಸ್ಫೋಟದ ಬಗ್ಗೆ ಸಿಎಂ ರೇವಂತ್ ರೆಡ್ಡಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಗಾಯಾಳುಗಳಿಗೆ ತಕ್ಷಣದ ವೈದ್ಯಕೀಯ ಸೇವೆ ಒದಗಿಸುವಂತೆ ಸೂಚನೆ ನೀಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕಂದಾಯ, ಪೊಲೀಸ್, ಅಗ್ನಿಶಾಮಕ ಇಲಾಖೆ, ಕಾರ್ಮಿಕ, ಕೈಗಾರಿಕೆ ಮತ್ತು ವೈದ್ಯಕೀಯ ತಂಡಗಳು ಸ್ಥಳದಲ್ಲಿಯೇ ಇದ್ದು ಸಮನ್ವಯದಿಂದ ಪರಿಹಾರ ಕಾರ್ಯಗಳನ್ನು ತೀವ್ರಗೊಳಿಸುವಂತೆ ಸಿಎಂ ರೇವಂತ್ ರೆಡ್ಡಿ ಸೂಚಿಸಿದರು. ಸದ್ಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.