ರಾಹುಲ್ ಗಾಂಧಿ
ರಾಹುಲ್ ಗಾಂಧಿ 
ದೇಶ

ಜಾತಿ ಗಣತಿಯಿಂದ ಮೀಸಲಾತಿಯ ಶೇ.50 ರಷ್ಟು ಮಿತಿ ದೂರ: ರಾಹುಲ್ ಗಾಂಧಿ

Srinivas Rao BV

ನವದೆಹಲಿ: ಅಧಿಕಾರಕ್ಕೆ ಬಂದಲ್ಲಿ ಜಾತಿ ಗಣತಿ ನಡೆಸುವ ಪಕ್ಷದ ನಿರ್ಧಾರವನ್ನು ರಾಹುಲ್ ಗಾಂಧಿ ಪುನರುಚ್ಚರಿಸಿದ್ದು, ಈ ಕ್ರಮ ಹಾಗೂ ಆರ್ಥಿಕತ ಸ್ಥಿತಿಗತಿಯನ್ನು ಅರಿಯುವುದರಿಂದ ಮೀಸಲಾತಿಗೆ ವಿಧಿಸಲಾಗಿರುವ ಶೇ.50 ರಷ್ಟು ಮಿತಿ ಇಲ್ಲವಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ಗಾಂಧಿ ತಮ್ಮ ಪಕ್ಷದ ಈ ಭರವಸೆಯನ್ನು ನ್ಯಾಯದೆಡೆಗಿನ ಮೊದಲ ಹೆಜ್ಜೆ ಎಂದು ಹೇಳಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಯಾರು ಬಡವರು ಎಂದು ನಾವು ಎಂದಾದರೂ ಯೋಚಿಸಿದ್ದೇವೆಯೇ? ಎಷ್ಟು ಮಂದಿ ಮತ್ತು ಯಾವ ಸ್ಥಿತಿಯಲ್ಲಿದ್ದಾರೆ? ಇದೆಲ್ಲವನ್ನೂ ಲೆಕ್ಕಿಸಬೇಕಲ್ಲವೇ?" ಬಿಹಾರದಲ್ಲಿ ನಡೆಸಿದ ಜಾತಿ ಸಮೀಕ್ಷೆಯು 88 ಪ್ರತಿಶತದಷ್ಟು ಬಡ ಜನಸಂಖ್ಯೆಯು ದಲಿತ, ಬುಡಕಟ್ಟು, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಂದ ಬಂದಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದೆ ಎಂದು ಗಾಂಧಿ ಹೇಳಿದ್ದಾರೆ.

"ಬಿಹಾರದ ಅಂಕಿಅಂಶಗಳು ದೇಶದ ನೈಜ ಚಿತ್ರದ ಒಂದು ಸಣ್ಣ ನೋಟವಾಗಿದೆ, ದೇಶದ ಬಡ ಜನಸಂಖ್ಯೆಯು ಯಾವ ಸ್ಥಿತಿಯಲ್ಲಿ ವಾಸಿಸುತ್ತಿದೆ ಎಂಬ ಕಲ್ಪನೆಯೂ ನಮಗೆ ಇಲ್ಲ" ಎಂದು ಅವರು ಹೇಳಿದರು.

ಅದಕ್ಕಾಗಿಯೇ ನಾವು ಜಾತಿ ಗಣತಿ, ಆರ್ಥಿಕ ಮ್ಯಾಪಿಂಗ್ ಎಂಬ ಎರಡು ಐತಿಹಾಸಿಕ ಕ್ರಮಗಳನ್ನು ಕೈಗೊಳ್ಳಲಿದ್ದೇವೆ, ಅದರ ಆಧಾರದ ಮೇಲೆ ನಾವು ಶೇಕಡಾ 50 ರ ಮೀಸಲಾತಿ ಮಿತಿಯನ್ನು ತೆಗೆದುಹಾಕುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಹಂತವು ದೇಶದ ನೈಜ ಚಿತ್ರವನ್ನು ಒದಗಿಸುತ್ತದೆ ಮತ್ತು ಎಲ್ಲರಿಗೂ ಸರಿಯಾದ ಮೀಸಲಾತಿ, ಹಕ್ಕುಗಳು ಮತ್ತು ಹಂಚಿಕೆಯನ್ನು ಒದಗಿಸುತ್ತದೆ ಎಂದು ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಪಕ್ಷ ಕೈಗೊಳ್ಳಲು ಉದ್ದೇಶಿಸಿರುವ ಕ್ರಮ ಬಡವರಿಗೆ ಸರಿಯಾದ ನೀತಿಗಳು ಮತ್ತು ಯೋಜನೆಗಳನ್ನು ಮಾಡಲು ಸಹಾಯ ಮಾಡುತ್ತದೆ. ಶಿಕ್ಷಣ, ಸಂಪಾದನೆ, ಔಷಧಿಗಳ ಹೋರಾಟದಿಂದ ಅವರನ್ನು ಪಾರುಮಾಡಲು ಮತ್ತು ಅವರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ" ಎಂದು ಕಾಂಗ್ರೆಸ್ ನಾಯಕ ಹೇಳಿದರು.

ಆದ್ದರಿಂದ ಎಚ್ಚೆತ್ತುಕೊಂಡು ದನಿ ಎತ್ತಬೇಕು, ಜಾತಿ ಗಣತಿ ನಿಮ್ಮ ಹಕ್ಕು ಮತ್ತು ಅದು ನಿಮ್ಮನ್ನು ಕಷ್ಟದ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುತ್ತದೆ ಎಂದು ರಾಹುಲ್ ಗಾಂಧಿ ಜನತೆಗೆ ತಿಳಿಸಿದ್ದಾರೆ.

SCROLL FOR NEXT