ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 
ದೇಶ

ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಗೆ ಗಾಯ; ಹಿಂದಿನಿಂದ ತಳ್ಳಿದ್ದು ಯಾರೆಂಬ ಬಗ್ಗೆ SIT ತನಿಖೆ

Ramyashree GN

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಡೆಯುವಾಗ ತಮ್ಮ ನಿವಾಸದಲ್ಲಿಯೇ ಕೆಳಗೆ ಬಿದ್ದು ಹಣೆಗೆ ಗಾಯವಾಗಿದ್ದು, ಘಟನೆ ಹಿಂದಿನ ಕಾರಣವನ್ನು ಕೋಲ್ಕತ್ತಾ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಲಿದೆ.

ಅವರ ನಿವಾಸದಲ್ಲಿಯೇ ಬಿದ್ದು ಗಾಯಗೊಂಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಸಂಜೆ 7-30ರಲ್ಲಿ ಘಟನೆ ನಡೆದಿದ್ದು, ಅವರ ಹಣೆ ಹಾಗೂ ಮೂಗಿನ ಮೇಲೆ ಗಾಯವಾಗಿದೆ ಎಂದು ಎಸ್‌ಎಸ್‌ಕೆಎಂ ಆಸ್ಪತ್ರೆಯ ನಿರ್ದೇಶಕ ಮಣಿಮೊಯ್ ಬಂಡೋಪಾಧ್ಯಾಯ ತಿಳಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಸ್‌ಎಸ್‌ಕೆಎಂ ಆಸ್ಪತ್ರೆಯ ನಿರ್ದೇಶಕ ಬಂಡೋಪಾಧ್ಯಾಯ ಅವರು, ಹಿಂದಿನಿಂದ ಯಾರೋ ತಳ್ಳಿರುವುದರಿಂದಲೇ ಬ್ಯಾನರ್ಜಿ ಅವರು ಬಿದ್ದಿರಬಹುದು ಎಂದು ಹೇಳಿದ್ದಾರೆ.

ಈ ಕುರಿತು ತನಿಖೆ ನಡೆಸಲಿರುವ ಎಸ್‌ಐಟಿಗೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸೇರಿಸಿಕೊಳ್ಳಲಾಗುವುದು ಎಂದು ನಗರ ಪೊಲೀಸ್ ಮೂಲಗಳು ತಿಳಿಸಿವೆ. ಎಸ್‌ಐಟಿಯ ತನಿಖಾ ಪ್ರಕ್ರಿಯೆಯನ್ನು ನಗರ ಪೊಲೀಸ್ ವಿನೀತ್ ಕುಮಾರ್ ಗೋಯಲ್ ಅವರು ಮೇಲ್ವಿಚಾರಣೆ ಮಾಡಲಿದ್ದಾರೆ.

ದಕ್ಷಿಣ ಕೋಲ್ಕತ್ತಾದ ಕಾಳಿಘಾಟ್‌ನಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ಒಳ ಮತ್ತು ಹೊರ ಆವರಣದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಎಸ್‌ಐಟಿ ಸದಸ್ಯರು ಪರಿಶೀಲಿಸಲಿದ್ದಾರೆ. ಮುಖ್ಯಮಂತ್ರಿ ನಿವಾಸದಲ್ಲಿ ನಿಯೋಜನೆಗೊಂಡಿರುವ ಭದ್ರತಾ ಸಿಬ್ಬಂದಿಯನ್ನೂ ಎಸ್‌ಐಟಿ ಸದಸ್ಯರು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ವಿವಿಐಪಿಯ ಭದ್ರತಾ ಅಂಶಗಳನ್ನು ಒಳಗೊಂಡಿರುವ ಈ ಘಟನೆಯನ್ನು ನಗರ ಪೊಲೀಸರು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ ಎಂದು ನಗರದ ಪೊಲೀಸ್ ಮೂಲಗಳು ತಿಳಿಸಿವೆ. ಮುಖ್ಯಮಂತ್ರಿಯನ್ನು ಹಿಂದಿನಿಂದ ತಳ್ಳಿದ್ದು ಯಾರು ಎಂಬುದನ್ನು ತನಿಖೆ ಮಾಡುವುದರ ಜೊತೆಗೆ, ಮುಖ್ಯಮಂತ್ರಿಗಳ ನಿವಾಸದಲ್ಲಿ ಅಸ್ತಿತ್ವದಲ್ಲಿರುವ ಭದ್ರತಾ ವ್ಯವಸ್ಥೆಗಳನ್ನು ಸಹ ಪರಿಶೀಲಿಸಲಾಗುತ್ತದೆ.

ತಮ್ಮ ನಿವಾಸದಲ್ಲಿಯೇ ಬಿದ್ದು ಗಾಯಗೊಂಡಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕೂಡಲೇ ಸಮೀಪದ ಎಸ್‌ಎಸ್‌ಕೆಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು. ರಾತ್ರಿ ವೈದ್ಯರು ಹಣೆಗೆ ನಾಲ್ಕು ಹೊಲಿಗೆಗಳನ್ನು ಹಾಕಿದ್ದು, ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಆಸ್ಪತ್ರೆಯಿಂದ ಬಿಡುಗಡೆಯಾದ ಸುಮಾರು ಒಂದು ಗಂಟೆಯ ನಂತರ ಎಸ್‌ಎಸ್‌ಕೆಎಂ ನಿರ್ದೇಶಕರು ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ಮುಖ್ಯಮಂತ್ರಿಯನ್ನು ಹಿಂದಿನಿಂದ ಯಾರೋ ತಳ್ಳಿರಬಹುದು ಎಂದಿದ್ದರು.

SCROLL FOR NEXT