ಕೆ ಸುರೇಂದ್ರನ್ - ರಾಹುಲ್ ಗಾಂಧಿ
ಕೆ ಸುರೇಂದ್ರನ್ - ರಾಹುಲ್ ಗಾಂಧಿ 
ದೇಶ

ವಯನಾಡಿನಲ್ಲಿ ರಾಹುಲ್ ಗಾಂಧಿ V/s ಸುರೇಂದ್ರನ್: ಅಮೇಥಿಯ ಫಲಿತಾಂಶವೇ ಇಲ್ಲೂ ಬರಲಿದೆ - ಬಿಜೆಪಿ ಅಭ್ಯರ್ಥಿ

Lingaraj Badiger

ವಯನಾಡ್: ಕೇರಳದಲ್ಲಿ ಲೋಕಸಭೆ ಚುನಾವಣೆ ಕುತೂಹಲಕಾರಿ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರತಿನಿಧಿಸುತ್ತಿರುವ ವಯನಾಡ್ ಕ್ಷೇತ್ರದಲ್ಲಿ ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಅವರನ್ನು ಕೇಸರಿ ಪಕ್ಷ ಕಣಕ್ಕಳಿಸಿದೆ. ಎಡರಂಗವು ಹಿರಿಯ ಸಿಪಿಐ ನಾಯಕ ಅನ್ನಿ ರಾಜಾ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದೆ.

ವಯನಾಡಿನಲ್ಲಿ 2019 ರಲ್ಲಿ 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದ ರಾಹುಲ್ ಗಾಂಧಿ ವಿರುದ್ಧ ಈ ಬಾರಿ ಕೆ ಸುರೇಂದ್ರನ್ ಅವರು ಸ್ಪರ್ಧಿಸುತ್ತಿದ್ದು, "ಅಮೇಥಿಯಲ್ಲಿ ಬಂದ ಫಲಿತಾಂಶವೇ ಇಲ್ಲಿಯೂ ಬರಲಿದೆ" ಎಂದು ಸೋಮವಾರ ಹೇಳಿದ್ದಾರೆ.

ಇಂಡಿಯಾ ಮೈತ್ರಿಕೂಟದ ಇಬ್ಬರು ಹಿರಿಯ ನಾಯಕರಾದ ರಾಹುಲ್ ಗಾಂಧಿ ಮತ್ತು ಅನ್ನಿ ರಾಜಾ ಅವರ ವಿರುದ್ಧ ಬಿಜೆಪಿ ಕೇಂದ್ರ ನಾಯಕತ್ವ ಸುರೇಂದ್ರನ್ ಅವರ ಉಮೇದುವಾರಿಕೆಯನ್ನು ಭಾನುವಾರ ಘೋಷಿಸಿದೆ. 2019 ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಕೇವಲ ಶೇಕಡಾ 7.25 ರಷ್ಟು ಮತಗಳನ್ನು ಪಡೆದಿದ್ದರು.

ತಮ್ಮ ಉಮೇದುವಾರಿಕೆ ಘೋಷಣೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸುರೇಂದ್ರನ್, ಕಳೆದ ಬಾರಿ ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಎದುರಾದ ಫಲಿತಾಂಶವೇ ಈ ಬಾರಿ ವಯನಾಡಿನಲ್ಲಿ ಎದುರಿಸಬೇಕಾಗುತ್ತದೆ ಎಂದಿದ್ದಾರೆ.

"ವಯನಾಡು ಅಭಿವೃದ್ಧಿಯ ಸಮಸ್ಯೆ ಎದುರಿಸುತ್ತಿದೆ. ಕ್ಷೇತ್ರಕ್ಕೆ ರಾಹುಲ್ ಗಾಂಧಿ ಏನೂ ಮಾಡಿಲ್ಲ" ಎಂದು ಸುರೇಂದ್ರನ್ ಹೇಳಿದ್ದಾರೆ.

ಕೋಯಿಕ್ಕೋಡ್ ಮೂಲದ ಸುರೇಂದ್ರನ್ ಅವರು ಈ ಹಿಂದೆ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಪತ್ತನಂತಿಟ್ಟದಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಕಾಂಗ್ರೆಸ್ ಮತ್ತು ಎಡ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿದ್ದ ಸುರೇಂದ್ರನ್, ಮೂರನೇ ಸ್ಥಾನ ಪಡೆದರು. ಸುರೇಂದ್ರನ್ ಅವರು 2016 ರ ವಿಧಾನಸಭಾ ಚುನಾವಣೆಯಲ್ಲಿ ಮತ್ತು 2019 ರಲ್ಲಿ ನಡೆದ ಉಪಚುನಾವಣೆಯಲ್ಲಿಯೂ ಸ್ಪರ್ಧಿಸಿ ಸೋತಿದ್ದಾರೆ. 2020 ರಲ್ಲಿ ಬಿಜೆಪಿ ಕೇರಳ ಘಟಕದ ಅಧ್ಯಕ್ಷರಾಗಿ ನೇಮಕಗೊಂಡರು.

SCROLL FOR NEXT