ಹೈದರಾಬಾದ್: ಲೋಕಸಭಾ ಚುನಾವಣೆ 2024ರ 4ನೇ ಹಂತದ ಮತದಾನ ನಡೆಯುತ್ತಿದ್ದು, ತೆಲಂಗಾಣ, ಆಂಧ್ರ ಪ್ರದೇಶ ಮತ್ತು ಒಡಿಶಾದಲ್ಲಿ ಮತದಾನ ನಡೆಯುತ್ತಿದೆ.
ತೆಲಂಗಾಣದಲ್ಲಿ ಲೋಕಸಭೆ ಚುನಾವಣೆ ಶಾಂತಿಯುತವಾಗಿ ನಡೆಯುತ್ತಿದ್ದು, ಬೇಸಿಗೆಯಾದ್ದರಿಂದ ಬೆಳಗ್ಗೆಯಿಂದಲೇ ಜನ ಸಾಮಾನ್ಯರು ಹಾಗೂ ಗಣ್ಯರು ಬಂದು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಬೆಳಗ್ಗೆ 7 ಗಂಟೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತಗಟ್ಟೆಗಳಲ್ಲಿ ಸಾಲುಗಟ್ಟಿ ನಿಂತು ಮತದಾನ ಮಾಡುತ್ತಿದ್ದಾರೆ. ಅಂತೆಯೇ ತೆಲುಗು ಚಿತ್ರರಂಗದ ಖ್ಯಾತನಾಮರು ಇಂದು ತಮ್ಮ ಹಕ್ಕು ಚಲಾಯಿಸಿದರು.
ಖ್ಯಾತ ನಟ ಜೂನಿಯರ್ ಎನ್ ಟಿಆರ್ ತಮ್ಮ ತಾಯಿ ಶಾಲಿನಿ ಹಾಗೂ ಪತ್ನಿ ಪ್ರಣತಿ ಅವರೊಂದಿಗೆ ಹೈದರಾಬಾದ್ ನ ಓಬುಲ್ ರೆಡ್ಡಿ ಶಾಲೆಯ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಈ ವೇಳೆ ಜನ ಸಾಮಾನ್ಯರಂತೆ ಸರತಿ ಸಾಲಲ್ಲಿ ನಿಂತು ಕಾದು ಮತದಾನ ಮಾಡಿದ್ದು ಎಲ್ಲರ ಗಮನ ಸೆಳೆಯಿತು.
ಅಂತೆಯೇ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹೈದರಾಬಾದ್ ನ ಬಿಎಸ್‌ಎನ್‌ಎಲ್ ಸೆಂಟರ್ ಜುಬಿಲಿ ಹಿಲ್ಸ್‌ನಲ್ಲಿ ಮತದಾನ ಮಾಡಿದರು. ಅಂತೆಯೇ ಖ್ಯಾತ ನಟ ಪವರ್ ಸ್ಟಾರ್ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಕೂಡ ತಮ್ಮ ಪತ್ನಿ ಸಮೇತ ಆಗಮಿಸಿ ಮತದಾನ ಮಾಡಿದರು. ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ತಮ್ಮ ಪತ್ನಿ ಸುರೇಖಾ ಅವರೊಂದಿಗೆ ಆಗಮಿಸಿ ಮತ ಹಕ್ಕು ಚಲಾಯಿಸಿದರು.
ಟಾಲಿವುಡ್ ನ ಖ್ಯಾತ ನಿರ್ದೇಶಕ ಮತ್ತು ಸಿನಿಮಟೋಗ್ರಾಫರ್ ತೇಜ ಅವರು ಪತ್ನಿ ಸಮೇತ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಅಂತೆಯೇ ಕಡಪದಲ್ಲಿ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ, ಹೈದರಾಬಾದ್ ನಲ್ಲಿ ಮಾಜಿ ಸಿಎಂ ಎಂ ಚಂದ್ರಬಾಬು ನಾಯ್ಡು ಮತದಾನ ಮಾಡಿದರು. ಅಂತೆಯೇ ಹೈದರಾಬಾದ್ ನಲ್ಲಿ ಎಐಎಂಐಎಂ ಪಕ್ಷದ ಮುಖ್ಯಸ್ಥ, ಹಾಲಿ ಸಂಸದ ಅಸಾದುದ್ದೀನ್ ಓವೈಸಿ ತಮ್ಮ ಇಡೀ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ್ದು ವಿಶೇಷವಾಗಿತ್ತು.