ನವದೆಹಲಿ: ಆಮ್ ಆದ್ಮಿ ಪಕ್ಷದ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದು, ದೆಹಲಿಯ ತೀಸ್ ಹಜಾರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ತನ್ನ ಬಂಧನಕ್ಕೂ ಮುನ್ನ, ಬಿಭವ್ ಕುಮಾರ್ ಅವರು ದೆಹಲಿ ಪೊಲೀಸರಿಗೆ ಇಮೇಲ್ ಕಳುಹಿಸಿದ್ದು, ಮಲಿವಾಲ್ ಅವರ ಮೇಲಿನ ಹಲ್ಲೆ ಆರೋಪದ ಬಗ್ಗೆ ನಡೆಯುತ್ತಿರುವ ತನಿಖೆಯಲ್ಲಿ ಸಹಕರಿಸಲು ಸಿದ್ಧ ಎಂದು ಹೇಳಿದ್ದು, ತಮ್ಮ ದೂರಿನ ಬಗ್ಗೆಯೂ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.
ಮಲಿವಾಲ್ ಅವರು ಸಿಎಂ ಅವರ ಸಿವಿಲ್ ಲೈನ್ಸ್ ನಿವಾಸಕ್ಕೆ 'ಅನಧಿಕೃತ ಪ್ರವೇಶ' ಮಾಡಿದ್ದಾರೆ ಮತ್ತು ತಮ್ಮನ್ನು 'ಮೌಖಿಕವಾಗಿ ನಿಂದಿಸಿದ್ದಾರೆ' ಎಂದು ಆರೋಪಿಸಿ ಬಿಭವ್ ಕುಮಾರ್ ಶುಕ್ರವಾರ ಪೊಲೀಸರಿಗೆ ಪ್ರತಿದೂರು ದಾಖಲಿಸಿದ್ದಾರೆ.
ಬಿಭವ್ ಕುಮಾರ್ ಅವರು ತಮ್ಮ ದೂರಿನಲ್ಲಿ, ಮಲಿವಾಲ್ ಅವರು ನಿವಾಸದ ಭದ್ರತೆಯನ್ನು ಉಲ್ಲಂಘಿಸಿ ಅನಧಿಕೃತವಾಗಿ ಸಿಎಂ ನಿವಾಸ ಪ್ರವೇಶಿದ್ದಾರೆ ಮತ್ತು ಮೌಖಿಕವಾಗಿ ತಮ್ಮನ್ನು ನಿಂದಿಸಿ ಬೆದರಿಕೆ ಹಾಕಿದ್ದಾರೆ. ಇದರ ಹಿಂದೆ ಬಿಜೆಪಿಯ ಕೈವಾಡ ಇದೆ ಎಂದು ಸಹ ಆರೋಪಿಸಿದ್ದಾರೆ.
ಮೇ 13ರಂದು ರಾಜ್ಯಸಭಾ ಸಂಸದೆ ಎಂದು ಭದ್ರತಾ ಸಿಬ್ಬಂದಿಗೆ ಹೇಳುವ ಮೂಲಕ ಮಲಿವಾಲ್ ಅವರು ಸಿಎಂ ನಿವಾಸಕ್ಕೆ ನುಗ್ಗಿದ್ದು, ಭದ್ರತಾ ಅಧಿಕಾರಿಗಳ ಆಕ್ಷೇಪಣೆಗಳ ಹೊರತಾಗಿಯೂ ಅವರು ಬಲವಂತವಾಗಿ ಸಿಎಂ ನಿವಾಸಕ್ಕೆ ಪ್ರವೇಶಿಸಿದ್ದಾರೆ ಎಂದು ಕುಮಾರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಮಲಿವಾಲ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇದು ಚುನಾವಣಾ ಸಮಯವಾದ್ದರಿಂದ ಇದೆಲ್ಲವೂ ಬಿಜೆಪಿಯ ಆಜ್ಞೆಯ ಮೇರೆಗೆ ನಡೆದಿರಬಹುದು. ಅವರ ಕರೆ, ದಾಖಲೆಗಳು, ಚಾಟ್‌ಗಳು ಮತ್ತು ಬಿಜೆಪಿ ನಾಯಕರೊಂದಿಗಿನ ಸಂವಾದದ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಕುಮಾರ್ ದೂರಿನಲ್ಲಿ ಆಗ್ರಹಿಸಿದ್ದಾರೆ.