ನವದೆಹಲಿ: ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ತಂಡವು ಭಾನುವಾರ ಇಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಅಧಿಕೃತ ನಿವಾಸವನ್ನು ತಲುಪಿದ್ದು, ಸಿಸಿಟಿವಿ ಡಿವಿಆರ್ ಅನ್ನು ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಮೇ 13 ರಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾಗಲು ಸಿಎಂ ನಿವಾಸಕ್ಕೆ ತೆರಳಿದ್ದ ವೇಳೆ ಅವರ ಆಪ್ತ ಬಿಭವ್ ಕುಮಾರ್ ತಮ್ಮ ಮೇಲೆ ಹಲ್ಲೆ ನಡೆಸಿದ್ದರು ಎಂದು ಮಲಿವಾಲ್ ಆರೋಪಿಸಿದ್ದಾರೆ. ಮಲಿವಾಲ್ ಮೇಲೆ ಹಲ್ಲೆ ನಡೆಸಿದ ದೃಶ್ಯಾವಳಿಗಳನ್ನು ಪಡೆಯಲು ಪೊಲೀಸರ ತಂಡವು ಸಿಸಿಟಿವಿ ಡಿವಿಆರ್ (ಡಿಜಿಟಲ್ ವಿಡಿಯೋ ರೆಕಾರ್ಡರ್) ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದೆ ಎಂದು ಅವರು ಹೇಳಿದರು.
ಸಿಎಂ ನಿವಾಸದ ಸಿಸಿಟಿವಿ ದೃಶ್ಯಾವಳಿಗಳನ್ನು ತಿರುಚಲಾಗುತ್ತಿದೆ ಎಂದು ಮಲಿವಾಲ್ ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿಭವ್ ಕುಮಾರ್ ಅವರನ್ನು ಶನಿವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ವಿಚಾರಣೆ ವೇಳೆ ಬಿಭವ್ ಕುಮಾರ್ ಅವರು ಸರಿಯಾದ ಉತ್ತರ ನೀಡುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಲಿವಾಲ್ ಅವರ ದೂರಿನ ನಂತರ ದೆಹಲಿ ಪೊಲೀಸರು ಬಿಭವ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 308, 341, 506 ಮತ್ತು 509 ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.