ಹೈದರಾಬಾದ್: ತೆಲಂಗಾಣದಲ್ಲಿ ದಿ ರಾಮೇಶ್ವರಂ ಕೆಫೆ ಸೇರಿದಂತೆ ಹಲವು ಹೊಟೆಲ್ ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ಮಾಡಿದ್ದು, ಈ ವೇಳೆ ಅವಧಿ ಮೀರಿದ ಆಹಾರೋತ್ಪನ್ನಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ತೆಲಂಗಾಣ ರಾಜಧಾನಿ ಹೈದರಾಬಾದ್ ಪ್ರತಿಷ್ಠಿತ ಹೊಟೆಲ್ ಗಳ ಮೇಲೆ ತೆಲಂಗಾಣ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ಹೈದರಾಬಾದ್ ನ ಸಂಜೀವರೆಡ್ಡಿ ನಗರದಲ್ಲಿರುವ ಹೊಟೆಲ್ ಸಾಯಿ ಬೃಂದಾವನ್, ಉಪ್ಪಾಲ್ ನಲ್ಲಿರುವ ಮಾಸ್ಟರ್ ಚೆಫ್ ರೆಸ್ಟೋರೆಂಟ್, KFC, ಸೋಮಾಜಿಗೂಡದಲ್ಲಿರುವ ಕೃತುಂಗಾ ದಿ ಪಾಳೇಗಾರ್ಸ್ ಕ್ಯುಸಿನ್ ಹೊಟೆಲ್, ಬಂಜಾರ್ ಹಿಲ್ಸ್ ನಲ್ಲಿರುವ ಬಾಸ್ಕಿನ್ ರಾಬಿನ್ಸ್, ಮಾಧಾಪುರ್ ಪ್ರದೇಶದಲ್ಲಿರುವ ದಿ ರಾಮೇಶ್ವರಂ ಕೆಫೆ ಸೇರಿದಂತೆ ಹಲವು ಹೊಟೆಲ್ ಗಳ ಮೇಲೆ ದಾಳಿ ನಡೆಸಿದ್ದಾರೆ.
ಈ ವೇಳೆ ಈ ಹೊಟೆಲ್ ಗಳಲ್ಲಿ ಅವಧಿ ಮೀರಿದ ಆಹೋರಾತ್ಪನ್ನಗಳು ಪತ್ತೆಯಾಗಿದ್ದು, ಮಾಧಾಪುರ್ ಪ್ರದೇಶದ ದಿ ರಾಮೇಶ್ವರಂ ಕೆಫೆಯಲ್ಲಿ ಅವಧಿ ಮೀರಿದ ಬೆಳೆ, ನಂದಿನಿ ಮೊಸರು, ಹಾಲು, ಅವಧಿಯೇ ಪ್ರಿಂಟ್ ಆಗದ ಅಕ್ಕಿ ಚೀಲಗಳು, ಬೆಲ್ಲ ಪತ್ತೆಯಾಗಿವೆ. ಈ ಎಲ್ಲ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಹೊಟೆಲ್ ನಲ್ಲಿ ಸಿಬ್ಬಂದಿಗಳ ವೈದ್ಯಕೀಯ ಪ್ರಮಾಣ ಪತ್ರ ಕೂಡ ಇರಲಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಂತೆಯೇ ಇಲ್ಲಿನ ಪ್ರಖ್ಯಾತ ಬಾಹುಬಲಿ ಕಿಚನ್ ಹೊಟೆಲ್ ನಲ್ಲಿ ನಿಷೇಧಿತ ಸಿಂಥೆಟಿಕ್ ಫುಡ್ ಕಲರ್ ಗಳು ಪತ್ತೆಯಾಗಿದ್ದು, ಹೊಟೆಲ್ ನ ಅಡುಗೆಮನೆ ಮತ್ತು ಸ್ಟೋರ್ ರೂಮ್‌ನೊಳಗಿನ ಆಹಾರ ಪದಾರ್ಥಗಳ ಭಾರೀ ಜಿರಳೆಗಳು ಕಂಡುಬಂದಿದೆ. ಇಲ್ಲಿ ಕೀಟ ನಿಯಂತ್ರಣ ದಾಖಲೆಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಎರಡು ಹೊಟೆಲ್ ಗಳು ಮಾತ್ರವಲ್ಲದೇ ಅಧಿಕಾರಿಗಳು ದಾಳಿ ನಡೆಸಿದ ಬಹುತೇಕ ಎಲ್ಲ ಹೊಟೆಲ್ ಗಳ ಪರಿಸ್ಥಿತಿ ಇದೇ ಆಗಿದ್ದು, ಅವಧಿ ಮೀರಿದ ಆಹಾರೋತ್ಪನ್ನಗಳು, ಶುಚಿತ್ವ ಕೊರತೆ, ಸಿಬ್ಬಂದಿಗಳ ಸಮಸ್ಯೆಗಳಿಂದ ಕೂಡಿವೆ ಎಂದು ತೆಲಂಗಾಣ ಆಹಾರ ಸುರಕ್ಷತಾ ಇಲಾಖೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ.
ರಾಮೇಶ್ವರಂ ಕೆಫೆ ಮಾಲೀಕರ ಸ್ಪಷ್ಟನೆ
ಹೊಟೆಲ್ ಮೇಲಿನ ಅಧಿಕಾರಿಗಳ ದಾಳಿಗೆ ಸಂಬಂಧಿಸಿದಂತೆ ರಾಮೇಶ್ವರಂ ಕೆಫೆ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, “ನಮ್ಮ ಹೈದರಾಬಾದ್ ಔಟ್‌ಲೇಟ್‌ಗೆ ಭೇಟಿ ನೀಡಿ ಅಧಿಕಾರಿಗಳು ಮಾಡಿದ ಪರಿಶೀಲನೆ ನಮ್ಮ ಗಮನಕ್ಕೆ ಬಂದಿದೆ. ಆಹಾರದ ನೈರ್ಮಲ್ಯದ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನಾವು ಸಂಪೂರ್ಣ ಬದ್ಧರಾಗಿದ್ದೇವೆ, ಗ್ರಾಹಕರ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ನಾವು ಈಗಾಗಲೇ ವಿಷಯವನ್ನು ಕೂಲಂಕುಷವಾಗಿ ಪರಿಶೀಲಿಸುತ್ತಿದ್ದೇವೆ, ಅಷ್ಟೇ ಅಲ್ಲದೆ, ಪ್ರತಿ ಔಟ್‌ಲೆಟ್‌ನ ಸ್ಟಾಕ್ ತೆಗೆದುಕೊಳ್ಳುವ ಸಂಬಂಧ ಆಂತರಿಕ ತನಿಖೆಗೂ ಆದೇಶಿಸಿದ್ದೇವೆ. ಹೈದರಾಬಾದ್ ಔಟ್‌ಲೇಟ್‌ಗೆ ಸಂಬಂಧಿಸಿದಂತೆ ನಾವು ಅಧಿಕಾರಿಗಳಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದ್ದೇವೆ''.
ನಮ್ಮ ಹೈದರಾಬಾದ್ ಔಟ್‌ಲೆಟ್ ಒಂದರಲ್ಲಿ ಮಾತ್ರ ವಾರಕ್ಕೆ 500 ಕೆಜಿಗೂ ಹೆಚ್ಚು ಉದ್ದಿನಬೇಳೆ, ಪ್ರತಿದಿನ 300 ಲೀಟರ್ ಹಾಲು, ದಿನಕ್ಕೆ 80 ರಿಂದ 100 ಲೀಟರ್ ಮೊಸರು ಅವಶ್ಯಕವಿರುತ್ತದೆ. ಇದೀಗ ಅಧಿಕಾರಿಗಳು ಪತ್ತೆ ಮಾಡಿದ ಸ್ಟಾಕ್‌ಗಳನ್ನು ಮೊಹರು ಮಾಡಿ, ಹಿಂದಿರುಗಿಲು ಉದ್ದೇಶಿಸಲಾಗಿತ್ತು, ಬಳಕೆಗಾಗಿ ಅಲ್ಲ. ಕಾನೂನು ರೀತಿಯಲ್ಲಿಯೇ ನಾವು ಖರೀದಿಸುವ ಪ್ರತಿಯೊಂದು ವಸ್ತುಗಳ ಸಂಗ್ರಹಣೆ ಮಾಡಲಾಗುತ್ತಿದೆ. ಉತ್ತಮ ಮಾರಾಟಗಾರರಿಂದ ಗುಣಮಟ್ಟದ ಉತ್ಪನ್ನಗಳನ್ನು ಖರೀದಿಸುತ್ತಿದ್ದೇವೆ ಎಂದು ಹೇಳಿದೆ.
ಅಂತೆಯೇ ಲೇಬಲ್ ಮಾಡದ ಉತ್ಪನ್ನಗಳ ಬಳಕೆಯನ್ನು ಕಾನೂನು ನಿಷೇಧಿಸುವುದಿಲ್ಲ ಎಂಬುದು ಗಮನಾರ್ಹ. ನಾವು ನಮ್ಮ ಎಲ್ಲಾ ಔಟ್‌ಲೇಟ್‌ಗಳಲ್ಲಿ ಅತ್ಯುನ್ನತ ನೈರ್ಮಲ್ಯ ಮಾನದಂಡಗಳನ್ನು ಅನುಸರಿಸುತ್ತಿದ್ದೇವೆ, ಆದರೆ, ಕೆಲವೆಡೆ ನಮ್ಮ ಅಡುಗೆಮನೆಯಲ್ಲಿ ಜಿರಳೆಗಳು ಕಂಡುಬಂದಿವೆ ಎಂದು ಕೆಲವು ವರದಿಗಳು ತಪ್ಪಾಗಿ ಅರ್ಥೈಸಲಾಗಿದ್ದು, ಈ ಸಂಬಂಧ ಯಾವುದೇ ಅಧಿಕೃತ ವರದಿಯಲ್ಲಿ ಉಲ್ಲೇಖಿಸಿಲ್ಲ.
ವಾಸ್ತವವಾಗಿ, ಜಿರಳೆಗಳು ಬೇರೆ ರೆಸ್ಟೋರೆಂಟ್‌ನಲ್ಲಿ ಕಂಡುಬಂದಿವೆ, ರಾಮೇಶ್ವರಂ ಕೆಫೆಯಲ್ಲಿ ಅಲ್ಲ. ನಮ್ಮ ಕೆಫೆಯಲ್ಲಿ, ನಮ್ಮ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನಾವು ಪ್ರತಿನಿತ್ಯ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುತ್ತೇವೆ. ಇನ್ನು, ನಾವು ಇದುವರೆಗೂ ಅಧಿಕಾರಿಗಳಿಂದ ಯಾವುದೇ ಶೋಕಾಸ್ ನೋಟಿಸ್‌ನನ್ನು ಸ್ವೀಕರಿಸಿಲ್ಲ, ಆದರೆ ಅವರ ಪರಿಶೀಲನೆಗೆ ನಾವು ಸಂಪೂರ್ಣ ಸಹಕಾರ ನೀಡುತ್ತಾ ಬಂದಿದ್ದೇವೆ. ನಮ್ಮ ಎಲ್ಲಾ ಔಟ್‌ಲೆಟ್‌ಗಳಿಗೆ ನೈರ್ಮಲ್ಯ ಮತ್ತು ಪ್ರಮಾಣಿತ ತಪಾಸಣೆ ನಡೆಸಲು ಈಗಾಗಲೇ ಆಂತರಿಕ ಆದೇಶವನ್ನು ನೀಡಿದ್ದೇವೆ. ಗ್ರಾಹಕರಿಗೆ ಗುಣಮಟ್ಟ ಹಾಗೂ ತಾಜಾ ಆಹಾರವನ್ನು ಒದಗಿಸುವುದು ನಮ್ಮ ಬದ್ಧತೆ ಹಾಗೂ ಸೇವೆಯಾಗಿದ್ದು, ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ ಎಂದು ರಾಮೇಶ್ವರಂ ಕೆಫೆ ಸಂಸ್ಥಾಪಕರಾದ ದಿವ್ಯಾ ರಾಘವೇಂದ್ರ ರಾವ್ ಮತ್ತು ರಾಘವೇಂದ್ರ ರಾವ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ.