ಹೈದರಾಬಾದ್: ತೆಲಂಗಾಣದಲ್ಲಿ ನಡೆದ ಫೋನ್ ಟ್ಯಾಪಿಂಗ್ ಪ್ರಕರಣದ ತನಿಖೆಯಲ್ಲಿ ಹಲವು ಅಚ್ಚರಿಯ ಅಂಶಗಳು ಬಹಿರಂಗವಾಗತೊಡಗಿದೆ.
ಮಾಜಿ ಸಿಎಂ ಕೆ ಚಂದ್ರಶೇಖರ್ ರಾವ್ ಬಿಜೆಪಿಯ ಹಿರಿಯ ನಾಯಕ ಬಿಎಲ್ ಸಂತೋಷ್ ನ್ನು ಬಂಧನಕ್ಕೊಳಪಡಿಸಿ ಆ ಮೂಲಕ ಬಿಜೆಪಿ ಮೇಲೆ ಒತ್ತಡ ಹೇರಲು ಬಯಸಿದ್ದರು ಎಂಬ ಅಂಶ ಈಗ ಬಹಿರಂಗವಾಗಿದೆ.
ಬಿಎಲ್ ಸಂತೋಷ್ ಬಂಧನಕ್ಕೊಳಗಾದರೆ, ದೆಹಲಿ ಮದ್ಯ ನೀತಿ ಹಗರಣದಲ್ಲಿ ಭಾಗಿಯಾಗಿ ಜಾರಿ ನಿರ್ದೇಶನಾಲಯದ ಬಂಧನಕ್ಕೊಳಗಾಗಿದ್ದ ತಮ್ಮ ಪುತ್ರಿ ಕೆ.ಕವಿತಾ ಅವರನ್ನು ಬಿಡುಗಡೆ ಮಾಡುವಂತೆ ಬಿಜೆಪಿ ಮೇಲೆ ಒತ್ತಡ ಹೇರಬಹುದು ಎಂಬುದು ಚಂದ್ರಶೇಖರ್ ರಾವ್ ಅವರ ಲೆಕ್ಕಾಚಾರವಾಗಿತ್ತು ಎಂದು ತಿಳಿದುಬಂದಿದೆ. ಈ ಆರೋಪಗಳನ್ನು ಪೊಲೀಸ್ ಇಲಾಖೆಯ ಮಾಜಿ ಉಪ ಆಯುಕ್ತ ಪಿ ರಾಧಾಕೃಷ್ಣ ರಾವ್ 6 ಪುಟಗಳ ತಪ್ಪೊಪ್ಪಿಗೆಯಲ್ಲಿ ಬಹಿರಂಗಪಡಿಸಿದ್ದಾರೆ.
ಮಾರ್ಚ್ ನಲ್ಲಿ ಹೈದರಾಬಾದ್ ನ ಬಂಜಾರಾ ಹಿಲ್ಸ್ ನಲ್ಲಿ ಪಿ ರಾಧಾಕೃಷ್ಣ ರಾವ್ ಅವರನ್ನು ಬಂಧನಕ್ಕೆ ಒಳಪಡಿಸಲಾಗಿತ್ತು. ಸಿಎಂ (ಚಂದ್ರಶೇಖರ್ ರಾವ್) ಹಾಗೂ ಅವರ ಆಪ್ತ ವಲಯದ ಆದೇಶದ ಮೇರೆಗೆ, ಬಿಆರ್ ಎಸ್ (ಅಂದಿನ ಟಿಆರ್ ಎಸ್) ಹಾಗೂ ಆ ಪಕ್ಷದ ಸರ್ಕಾರದ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಗಳನ್ನು ಹತ್ತಿಕ್ಕುತ್ತಿದ್ದೆ ಎಂದು ತಮ್ಮ ತಪ್ಪೊಪ್ಪಿಗೆಯಲ್ಲಿ ರಾಧಾಕೃಷ್ಣ ರಾವ್ ತಿಳಿಸಿದ್ದಾರೆ.