ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬಹುತೇಕ ಪೂರ್ಣಗೊಂಡಿದ್ದು,10 ವರ್ಷಗಳ ನಂತರ ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ.
ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದರೂ, ಫಲಿತಾಂಶ ಮಾತ್ರ ದೇಶದ ಅತ್ಯಂತ ಹಳೆಯ ಪಕ್ಷಕ್ಕೆ ಭಾರಿ ಆಘಾತವನ್ನುಂಟು ಮಾಡಿದೆ. ಪಕ್ಷದ ಕೆಲವು ನಾಯಕರು ಕಾಂಗ್ರೆಸ್‌ನ ಕಳಪೆ ಪ್ರದರ್ಶನಕ್ಕೆ ಚುನಾವಣೆಗೆ ಮುನ್ನ ಇದ್ದ ಗುಂಪುಗಾರಿಕೆ ಕಾರಣ ಎಂದು ಹೇಳುತ್ತಾರೆ.
ಮುಖ್ಯಮಂತ್ರಿ ಹುದ್ದೆಗಾಗಿ, ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ಮತ್ತು ಮಾಜಿ ಕೇಂದ್ರ ಸಚಿವೆ ಕುಮಾರಿ ಸೆಲ್ಜಾ ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ ನೇತೃತ್ವದ ಬಣಗಳ ನಡುವೆ ತೀವ್ರ ತಿಕ್ಕಾಟ ಇತ್ತು ಎನ್ನಲಾಗಿದೆ.
ಪಕ್ಷದ ಜನಪ್ರಿಯ ದಲಿತ ಮುಖ ಸೆಲ್ಜಾ ಅವರು ಎರಡು ವಾರಗಳ ಕಾಲ ಪ್ರಚಾರದಿಂದ ದೂರ ಉಳಿದರು ಮತ್ತು ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮಕ್ಕೂ ಗೈರು ಆಗಿದ್ದರು.
ಟಿಕೆಟ್ ಹಂಚಿಕೆಯು ಪಕ್ಷದ ಬಣಗಳಲ್ಲಿ ಘರ್ಷಣೆಗೆ ಕಾರಣವಾಯಿತು ಮತ್ತು ಸೆಲ್ಜಾ ಅವರು ತನಗೆ ಮತ್ತು ತಮ್ಮ 35 ನಿಷ್ಠಾವಂತರಿಗೆ ಟಿಕೆಟ್ ಬಯಸಿದ್ದರು. ಸೆಲ್ಜಾ ತನ್ನ ನಿಷ್ಠಾವಂತರಿಗೆ ಕೇವಲ ಹತ್ತು ಟಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರೆ, ಹೂಡಾ ಬಣ 70 ಅಭ್ಯರ್ಥಿಗಳನ್ನು ಪಡೆದುಕೊಂಡಿತ್ತು.
2019ರ ವಿಧಾನಸಭೆ ಚುನಾವಣೆಯಲ್ಲಿ ಆಂತರಿಕ ಕಲಹದಿಂದ ಸೋತಿದ್ದ ಕಾಂಗ್ರೆಸ್, ಈಗ ಮತ್ತೆ ಅದೇ ಬಣ ರಾಜಕೀಯಕ್ಕೆ ಬಲಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ವಿಧಾನಸಭಾ ಚುನಾವಣೆಗಳಿಂದ ಪಕ್ಷ ಯಾವುದೇ ಪಾಠ ಕಲಿತಂತೆ ಕಾಣುತ್ತಿಲ್ಲ ಎಂದು ನಾಯಕರೊಬ್ಬರು ತಿಳಿಸಿದ್ದಾರೆ.
ಹರಿಯಾಣದಲ್ಲಿ ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದಿದ್ದರೂ, ಅಭ್ಯರ್ಥಿಗಳಿಗೆ ಟಿಕೆಟ್ ನಿರ್ಧರಿಸುವಲ್ಲಿ ಹೂಡಾ ಬಣ ಮೇಲುಗೈ ಸಾಧಿಸಿದೆ ಎಂಬುದು ರಹಸ್ಯವಾಗಿರಲಿಲ್ಲ. ಮತ್ತೊಂದು ಕಾರಣವೆಂದರೆ ಕಾಂಗ್ರೆಸ್ ಜಾಟ್ ಸಮುದಾಯದ ಮೇಲೆ ಕೇಂದ್ರೀಕರಿಸಿದ್ದು, ಇತರ ಸಮುದಾಯದ ಮತಗಳ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ ಎನ್ನಲಾಗಿದೆ.
ಹಲವು ಪಕ್ಷೇತರ ಅಭ್ಯರ್ಥಿಗಳು ಮತ್ತು ಬಂಡಾಯಗಾರರು ಕಾಂಗ್ರೆಸ್ ಸೋಲಿಗೆ ಕಾರಣವಾಗಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಹೊರತುಪಡಿಸಿ, ಆಮ್ ಆದ್ಮಿ ಪಕ್ಷ, ಐಎನ್‌ಎಲ್‌ಡಿ-ಬಿಎಸ್‌ಪಿ, ಮತ್ತು ಜೆಜೆಪಿ-ಆಜಾದ್ ಸಮಾಜ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರಮುಖ ಪಕ್ಷಗಳಾಗಿವೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಎಪಿ ಜೊತೆ ಮೈತ್ರಿಗೆ ಉತ್ಸುಕರಾಗಿದ್ದರೂ ಹೂಡಾ ಬಣ ಮೈತ್ರಿ ಬಗ್ಗೆ ಹೆಚ್ಚು ಒಲವು ತೋರಲಿಲ್ಲ. ಹೀಗಾಗಿ ಮೈತ್ರಿ ಮಾತುಕತೆ ಮುರಿದು ಬಿದ್ದಿತು.