ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನದ Article 370ಯನ್ನು ಮೋದಿ ಸರ್ಕಾರ ಪುನಃ ಸ್ಥಾಪಿಸುತ್ತದೆ ಎಂದು ನಂಬುವುದು ಮೂರ್ಖತನ ಎಂದು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಗೆಲುವಿನ ಬೆನ್ನಲ್ಲೇ ಸರ್ಕಾರ ರಚನೆಗೆ ಸಿದ್ಧತೆ ನಡೆಸಿರುವ ಒಮರ್ ಅಬ್ದುಲ್ಲಾ ಇಂದು ಹಲವು ಕಾರ್ಯಕ್ರಮಗಳು ಮತ್ತು ಭೇಟಿಗಳನ್ನು ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಒಮರ್ ಅಬ್ದುಲ್ಲಾ, 'ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನದ Article 370ಯನ್ನು ಕಿತ್ತುಕೊಂಡ ಜನರಿಂದಲೇ ಅದು ಮರುಸ್ಥಾಪನೆಯಾಗುತ್ತದೆ ಎಂದು ಆಶಿಸುವುದು ಮೂರ್ಖತನ ಎಂದು ಹೇಳಿದರು.
"Article 370 ಕುರಿತು ನಮ್ಮ ರಾಜಕೀಯ ನಿಲುವು ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ. ನಾವು 370 ನೇ ವಿಧಿಯ ಬಗ್ಗೆ ಮೌನವಾಗಿರುತ್ತೇವೆ ಅಥವಾ 370 ನೇ ವಿಧಿ ನಮಗೆ ಈಗ ಸಮಸ್ಯೆಯಲ್ಲ ಎಂದು ನಾವು ಎಂದಿಗೂ ಹೇಳಿಲ್ಲ. ರಾಜ್ಯದಲ್ಲಿ ತಮ್ಮ ಹೊಸ ಸರ್ಕಾರವು ಕೆಲವು ವಿಶೇಷ ನಿಬಂಧನೆಗಳನ್ನು ಪಡೆಯುವ ಭರವಸೆ ಇದೆ.
ಅಲ್ಲದೆ ಪ್ರಸ್ತುತ ಪರಿಸ್ಥಿತಿಯಲ್ಲಿ Article 370 ಪುನಃ ಸ್ಥಾಪನೆಯಾಗುತ್ತದೆ ಎಂದು ಹೇಳುವುದು ಜನರಿಗೆ ಮೋಸ ಮಾಡಿದಂತಾಗುತ್ತದೆ. ಆದರೆ ಈ ಕುರಿತ ನಮ್ಮ ಪ್ರಯತ್ನಗಳು ಮತ್ತು ಹೋರಾಟ ಮುಂದುವರೆಯುತ್ತದೆ. ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಸಮಸ್ಯೆಯನ್ನು ಜೀವಂತವಾಗಿರಿಸುತ್ತದೆ ಮತ್ತು ಅದನ್ನು ಪ್ರಮುಖ ವೇದಿಕೆಗಳಲ್ಲಿ ಪ್ರಶ್ನಿಸುವುದನ್ನು ಮುಂದುವರಿಸುತ್ತದೆ ಎಂದರು.
ಆದರೆ 370ನೇ ವಿಧಿಯನ್ನು ಕಿತ್ತುಕೊಂಡ ಜನರಿಂದ ಅದನ್ನು ಮರುಸ್ಥಾಪನೆಗಾಗಿ ಆಶಿಸುವುದು ಮೂರ್ಖತನ. ಈ ಬಗ್ಗೆ ನಾನು ಚುನಾವಣೆಗೂ ಮೊದಲೇ ಹೇಳಿದ್ದೆ. ಈಗ ಪರಿಸ್ಥಿತಿ ನಮಗೆ ಅನುಕೂಲಕರವಾಗಿಲ್ಲದೇ ಇರಬಹುದು.
ಆದರೆ ಮುಂದಿನ ದಿನಗಳಲ್ಲಿ ದೇಶದಲ್ಲಿ ಸರ್ಕಾರ ಬದಲಾವಣೆಯಾಗಲಿದೆ ಎಂದು ಭಾವಿಸುತ್ತೇವೆ. ಹೊಸ ಸರ್ಕಾರದೊಂದಿಗೆ ನಾವು ಇದನ್ನು ಚರ್ಚಿಸಿ ಜಮ್ಮು ಮತ್ತು ಕಾಶ್ಮೀರ ಜನರ ಆಶೋತ್ತರಗಳಿಗೆ ತಕ್ಕಂತೆ ನಮ್ಮ ಹಕ್ಕು ಪಡೆಯಲು ಯತ್ನಿಸುತ್ತೇವೆ ಎಂದು ಒಮರ್ ಅಬ್ದುಲ್ಲಾ ಹೇಳಿದರು.