ನವದೆಹಲಿ: ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಶಾಸಕಾಂಗ ಪಕ್ಷದ ನಾಯಕರಾಗಿ ಒಮರ್ ಅಬ್ದುಲ್ಲಾ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.
ಗುರುವಾರ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಬಳಿಕ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ಅವರು ಹೇಳಿದ್ದಾರೆ. ಇದಕ್ಕೂ ಮೊದಲು, ನ್ಯಾಷನಲ್ ಕಾನ್ಫರೆನ್ಸ್‌ನ ಎಲ್ಲಾ ಚುನಾಯಿತ ಶಾಸಕರು ಪಕ್ಷದ ಪ್ರಧಾನ ಕಚೇರಿ ನವಾ-ಎ-ಸುಬಾದಲ್ಲಿ ಮಾತುಕತೆ ನಡೆಸಿದ್ದರು.
ಚುನಾವಣೆ ಪೂರ್ವದಲ್ಲಿ ಮಾಡಿಕೊಂಡ ಮೈತ್ರಿಯಂತೆ, ಸರ್ಕಾರ ರಚನೆ ಕುರಿತಂತೆ ಮಿತ್ರ ಪಕ್ಷಗಳೊಂದಿಗೆ ಶುಕ್ರವಾರ ಸಭೆ ನಡೆಸಲಾಗುವುದು ಎಂದೂ ಅವರು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. 90 ಸದಸ್ಯ ಬಲದ ವಿಧಾನಸಭೆಯಲ್ಲಿ 42 ಸ್ಥಾನಗಳನ್ನು ಗೆಲ್ಲುವ ಮೂಲಕ ನ್ಯಾಷನಲ್ ಕಾನ್ಫರೆನ್ಸ್ ಗೆಲುವಿನ ನಗೆ ಬೀರಿದೆ. 29 ಕ್ಷೇತ್ರಗಳಲ್ಲಿ ಗೆದ್ದಿರುವ ಬಿಜೆಪಿ 2ನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಗಳಿಗೆ (ಪಿಡಿಪಿ) ಭಾರಿ ಹಿನ್ನಡೆಯಾಗಿದ್ದು, ಕ್ರಮವಾಗಿ ಆರು ಮತ್ತು ಮೂರು ಸ್ಥಾನಗಳಲ್ಲಷ್ಟೇ ಜಯಗಳಿಸಿವೆ.
ಇದಲ್ಲದೆ, ಸರ್ಕಾರ ರಚನೆ ಪ್ರಕ್ರಿಯೆಯನ್ನು ಮುಂದಕ್ಕೆ ಕೊಂಡೊಯ್ಯಲು ಚುನಾವಣಾ ಪೂರ್ವ ಮೈತ್ರಿ ಪಾಲುದಾರರು (ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್, ಸಿಪಿಐ-ಎಂ, ಪ್ಯಾಂಥರ್ಸ್ ಪಾರ್ಟಿ) ಶುಕ್ರವಾರ ಸಭೆ ಸೇರಲಿದ್ದಾರೆ ಎಂದು ಹಿರಿಯ ರಾಜಕಾರಣಿ ಹೇಳಿದ್ದಾರೆ. ಇದೇ ವೇಳೆ ಒಮರ್ ಅಬ್ದುಲ್ಲಾ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದ್ದು, ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು. ಕಾಂಗ್ರೆಸ್‌ನಿಂದ ಬೆಂಬಲ ಪತ್ರ ಪಡೆಯಲು ಮಾತುಕತೆ ನಡೆಸಲಾಗುತ್ತಿದೆ. ಅಲ್ಲದೆ, ನಾಲ್ವರು ಸ್ವತಂತ್ರರು ನ್ಯಾಷನಲ್ ಕಾನ್ಫರೆನ್ಸ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈಗ ನಾಲ್ವರು ಸ್ವತಂತ್ರ ಶಾಸಕರು ಸೇರಿ ನಮ್ಮ ಸಂಖ್ಯೆ 42 ಆಗಿದೆ. ಕಾಂಗ್ರೆಸ್‌ನಿಂದ ಪತ್ರ ಬಂದ ಬಳಿಕ ರಾಜಭವನಕ್ಕೆ ತೆರಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದೇವೆ ಎಂದು ಅವರು ಹೇಳಿದರು.