ಚಂಡೀಗಢ: ಹರಿಯಾಣದಲ್ಲಿ ನೂತನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇದೇ ಅಕ್ಟೋಬರ್ 17 ರಂದು ಪಂಚಕುಲದಲ್ಲಿ ನಡೆಯಲಿದೆ ಎಂದು ಪಕ್ಷವು ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ, ಹಿರಿಯ ಬಿಜೆಪಿ ನಾಯಕರು ಮತ್ತು ಇತರ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪಂಚಕುಲ ಸೆಕ್ಟರ್ 5ರ ದಸರಾ ಮೈದಾನದಲ್ಲಿ ಬೆಳಗ್ಗೆ 10 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಹರಿಯಾಣ ಮುಖ್ಯಮಂತ್ರಿಯಾಗಿದ್ದ ಮನೋಹರ್ ಲಾಲ್ ಖಟ್ಟರ್ ಅವರನ್ನು ಬದಲಿಸಿ ನಯಾಬ್ ಸಿಂಗ್ ಸೈನಿ ಅವರನ್ನು ಕಳೆದ ಮಾರ್ಚ್ ತಿಂಗಳಲ್ಲಿ ನೇಮಿಸಲಾಗಿತ್ತು. ಈ ಬಾರಿ ಚುನಾವಣೆಯಲ್ಲಿ ಪಕ್ಷವು ಗೆದ್ದರೆ ಮುಖ್ಯಮಂತ್ರಿಯಾಗಿ ನಯಾಬ್ ಅವರೇ ಆಯ್ಕೆಯಾಗುತ್ತಾರೆ ಎಂದು ಬಿಜೆಪಿ ಸೂಚನೆ ನೀಡಿತ್ತು.
ಚುನಾವಣೆ ಮುಗಿದ ನಂತರ ಮತಗಟ್ಟೆ ಸಮೀಕ್ಷೆಗಳು ಈ ಬಾರಿ ಕಾಂಗ್ರೆಸ್ ಪರವೇ ಇದ್ದವು. ಆದರೆ ಮತ ಎಣಿಕೆ ನಂತರ ಅಚ್ಚರಿ ಫಲಿತಾಂಶ ಬಂದು ಬಿಜೆಪಿ ಕಾಂಗ್ರೆಸ್ ಗಿಂತ 11 ಸ್ಥಾನಗಳನ್ನು ಹೆಚ್ಚು ಅಂದರೆ 48 ಸ್ಥಾನಗಳನ್ನು ಗೆದ್ದುಕೊಂಡಿತು. ಜೆಜೆಪಿ ಮತ್ತು ಆಪ್ ಪಕ್ಷಗಳು ಹೆಸರಿಲ್ಲದಂತೆ ವಿಫಲವಾಗಿದ್ದು, ಐಎನ್‌ಎಲ್‌ಡಿ ಕೇವಲ ಎರಡು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.