ಹೈದರಾಬಾದ್: ತೆಲಂಗಾಣದಲ್ಲಿ ಕೌಶಲ್ಯ ಅಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಗೌತಮ್ ಅದಾನಿ ಬರೋಬ್ಬರಿ 100 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ಹೌದು. ಯುವಜನರಿಗೆ ಉದ್ಯಮ-ನಿರ್ದಿಷ್ಟ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ನೆರವಾಗುವ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಅದಾನಿ ಗ್ರೂಪ್‌ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸುತ್ತಿರುವ ಅದಾನಿ ಫೌಂಡೇಶನ್ ತೆಲಂಗಾಣ ಸರ್ಕಾರಕ್ಕೆ ರೂ. 100 ಕೋಟಿ ದೇಣಿಗೆ ನೀಡಿದೆ.
ಹೈದರಾಬಾದ್‌ನಲ್ಲಿ ಶುಕ್ರವಾರ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿದ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ನೇತೃತ್ವದ ನಿಯೋಗ ಚೆಕ್ ನ್ನು ಹಸ್ತಾಂತರಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ತೆಲಂಗಾಣ ಮುಖ್ಯಮಂತ್ರಿಗಳ ಕಾರ್ಯಾಲಯ, ಯುವ ಭಾರತ ಕೌಶಲ್ಯ ವಿಶ್ವವಿದ್ಯಾಲಯಗಳ ಸ್ಥಾಪನೆಗಾಗಿ ಗೌತಮ್ ಅದಾನಿ ಅವರು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ರೂ. 100 ಕೋಟಿ ಚೆಕ್ ಹಸ್ತಾಂತರಿಸುವುದಾಗಿ ಹೇಳಿದೆ.
ಯುವ ಸಬಲೀಕರಮ ಮತ್ತು ಅವರ ಕೌಶಲ್ಯ ಅಭಿವೃದ್ಧಿಗಾಗಿ ತೆಲಂಗಾಣ ಸರ್ಕಾರಕ್ಕೆ ಮತ್ತಷ್ಟು ಬೆಂಬಲ ನೀಡುವುದಾಗಿ ಗೌತಮ್ ಅದಾನಿ ಭರವಸೆ ನೀಡಿರುವುದಾಗಿ ಮುಖ್ಯಮಂತ್ರಿಗಳ ಕಾರ್ಯಾಲಯ ತಿಳಿಸಿದೆ. ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಹೈದರಾಬಾದ್ ನಲ್ಲಿ ಯುವ ಭಾರತ ಕೌಶಲ್ಯ ವಿಶ್ವವಿದ್ಯಾಲಯ ಸ್ಥಾಪಿಸಲಾಗುತ್ತಿದೆ.