ಮುಂಬೈ: ಬಂಧಿತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಸಹೋದರ ಅನ್ಮೋಲ್ ಸುಳಿವು ನೀಡಿದವರಿಗೆ 10 ಲಕ್ಷ ರು. ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಶುಕ್ರವಾರ ಘೋಷಿಸಿದೆ.
ಎನ್‌ಐಎ 2022ರಲ್ಲಿ ದಾಖಲಿಸಿರುವ ಎರಡು ಪ್ರಕರಣಗಳಲ್ಲಿ ಅನ್ಮೋಲ್ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಇತ್ತೀಚೆಗೆ ಗುಂಡು ಹಾರಿಸಿದ್ದ ಶೂಟರ್‌ಗಳು, ಅನ್ಮೋಲ್ ಸೂಚನೆ ಮೇರೆಗೆ ನಟನನ್ನು ಕೊಲ್ಲುವುದಕ್ಕಾಗಿ ಕೃತ್ಯ ನಡೆಸಿದ್ದಾಗಿ ಪೊಲೀಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದೂ ವರದಿಯಾಗಿದೆ.
‘ಭಾನು’ ಎಂದೂ ಕರೆಯಲ್ಪಡುವ ಅನೋಲ್ ಬಿಷ್ಣೋಯ್ ನಕಲಿ ಪಾಸ್ ಪೋರ್ಟ್ ಮೇಲೆ ಭಾರತದಿಂದ ಪಲಾಯನ ಮಾಡಿ, ಕಳೆದ ವರ್ಷ ಕೀನ್ಯಾದಲ್ಲಿ ಮತ್ತು ಈ ವರ್ಷ ಕೆನಡಾದಲ್ಲಿ ಕಾಣಿಸಿಕೊಂಡಿದ್ದ. ಅಕ್ಟೋಬರ್ 12 ರಂದು ಮುಂಬೈನ ಬಾಂದ್ರಾದಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಹತ್ಯೆಯ ಹಿಂದೆ ಅನ್ಮೋಲ್ ಬಿಷ್ಣೋಯ್ ಕೈವಾಡವಿದೆ ಎಂದು ಹೇಳಲಾಗಿದೆ. 2022ರಲ್ಲಿ ಪಂಜಾಬ್ ಗಾಯಕ ಸಿಧು ಮೊಸೆವಾಲಾ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಆತ ಬೇಕಾಗಿದ್ದಾನೆ. ಅನ್ಮೋಲ್ ಬಿಷ್ಣೋಯ್ ವಿರುದ್ಧ 18 ಪ್ರಕರಣಗಳು ದಾಖಲಾಗಿವೆ. ಪಂಜಾಬ್‌ನ ಫಾಜಿಲ್ಕಾ ಮೂಲದ ಅನ್ಮೋಲ್ ಬಿಷ್ಣೋಯ್ ಮತ್ತು ಲಾರೆನ್ಸ್ ಬಿಷ್ಣೋಯ್ ಇಬ್ಬರನ್ನೂ ಪ್ರಕರಣದಲ್ಲಿ ಬೇಕಾಗಿರುವ ಆರೋಪಿಗಳೆಂದು ಹೇಳಲಾಗಿದೆ. ಲಾರೆನ್ಸ್ ಬಿಷ್ಣೋಯ್ ಅವರು ಪ್ರಸ್ತುತ ಗುಜರಾತ್‌ನ ಸಬರಮತಿ ಜೈಲಿನಲ್ಲಿದ್ದಾನೆ.
ಇದಕ್ಕೂ ಮೊದಲು ಏಪ್ರಿಲ್ 14 ರಂದು ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಆತನ ವಿರುದ್ಧ ಲುಕ್ ಔಟ್ ಸುತ್ತೋಲೆ ಹೊರಡಿಸಿದ್ದರು. ಅಕ್ಟೋಬರ್ 12 ರಂದು ತನ್ನ ಮಗನ ಕಚೇರಿಯ ಎದುರೇ ಎನ್ ಸಿಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಕೊಂದ ಶೂಟರ್ ಗಳೊಂದಿಗೆ ಅನ್ಮೋಲ್ ಬಿಷ್ಣೋಯಿ ಸಂಪರ್ಕದಲ್ಲಿದ್ದರು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. 2022 ರ ಆಗಸ್ಟ್‌ನಲ್ಲಿ ಬಿಷ್ಣೋಯ್ ಸಹೋದರರು ಸೇರಿದಂತೆ ಒಂಬತ್ತು ಆರೋಪಿಗಳ ವಿರುದ್ಧ ಎನ್‌ಐಎ ಎಫ್‌ಐಆರ್ ದಾಖಲಿಸಿದೆ, "ಹಣ ಸಂಗ್ರಹಿಸಲು, ಕೇಂದ್ರಾಡಳಿತ ಪ್ರದೇಶವಾದ ದೆಹಲಿ ಮತ್ತು ಇತರ ಭಾಗಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಯುವಕರನ್ನು ನೇಮಿಸಿಕೊಳ್ಳುತ್ತಿದ್ದರು, ಇದು ಪಿತೂರಿಯ ಭಾಗವಾಗಿತ್ತು ಎಂದು ಹೇಳಲಾಗಿದೆ.