ರಾಂಚಿ: ಜಾರ್ಖಂಡ್ ನಲ್ಲಿ ಅಬಕಾರಿ ಇಲಾಖೆಯ ಕಾನ್ಸ್ಟೇಬಲ್ ಹುದ್ದೆಗೆ ನೇಮಕಾತಿಗಾಗಿ ದೈಹಿಕ ಪರೀಕ್ಷೆ ನಡೆಯುತ್ತಿದ್ದ ವೇಳೆ 11 ಮಂದಿ ಸಾವನ್ನಪ್ಪಿದ್ದಾರೆ.
ಜಾರ್ಖಂಡ್ ಅಬಕಾರಿ ಕಾನ್ಸ್‌ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆಗಳ ಅಡಿಯಲ್ಲಿ ದೈಹಿಕ ಪರೀಕ್ಷೆಗಳು ಆಗಸ್ಟ್ 22 ರಂದು ರಾಂಚಿ, ಗಿರಿದಿಹ್, ಹಜಾರಿಬಾಗ್, ಪಲಮು, ಪೂರ್ವ ಸಿಂಗ್‌ಭೂಮ್ ಮತ್ತು ಸಾಹೇಬ್‌ಗಂಜ್ ಜಿಲ್ಲೆಗಳಾದ್ಯಂತ ಏಳು ಕೇಂದ್ರಗಳಲ್ಲಿ ಪ್ರಾರಂಭವಾಗಿದ್ದವು.
ಪಲಮುದಲ್ಲಿ ನಾಲ್ಕು ಸಾವುಗಳು ಸಂಭವಿಸಿವೆ, ಗಿರಿದಿಹ್ ಮತ್ತು ಹಜಾರಿಬಾಗ್‌ನಲ್ಲಿ ತಲಾ ಇಬ್ಬರು ಮತ್ತು ರಾಂಚಿಯ ಜಾಗ್ವಾರ್ ಕೇಂದ್ರ ಮತ್ತು ಪೂರ್ವ ಸಿಂಗ್‌ಭೂಮ್‌ನ ಮೊಸಬಾನಿ ಮತ್ತು ಸಾಹೇಬ್‌ಗಂಜ್ ಕೇಂದ್ರಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಐಜಿ (ಕಾರ್ಯಾಚರಣೆ) ಅಮೋಲ್ ವಿ ಹೋಮ್ಕರ್ ಹೇಳಿದ್ದಾರೆ. ಅಸ್ವಾಭಾವಿಕ ಸಾವಿನ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಆಗಸ್ಟ್ 30 ರವರೆಗೆ ಒಟ್ಟು 1,27,772 ಆಕಾಂಕ್ಷಿಗಳು ದೈಹಿಕ ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 78,023 ಮಂದಿ ತೇರ್ಗಡೆಯಾಗಿದ್ದಾರೆ ಎಂದು ಹೇಳಿದ್ದಾರೆ. ಎಲ್ಲಾ ಕೇಂದ್ರಗಳಲ್ಲಿ ವೈದ್ಯಕೀಯ ತಂಡಗಳು, ಔಷಧಿಗಳು, ಆಂಬ್ಯುಲೆನ್ಸ್, ಮೊಬೈಲ್ ಶೌಚಾಲಯಗಳು ಮತ್ತು ಕುಡಿಯುವ ನೀರು ಸೇರಿದಂತೆ ಸಾಕಷ್ಟು ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂದು ಹೋಮ್ಕರ್ ಹೇಳಿದರು.
ಅಧಿಕಾರಿಗಳ ದುರಾಡಳಿತದಿಂದ ಸಾವು ಸಂಭವಿಸಿದೆ ಎಂದು ಆರೋಪಿಸಿ ಬಿಜೆಪಿ ಯುವ ಘಟಕವು ರಾಂಚಿಯ ಆಲ್ಬರ್ಟ್ ಎಕ್ಕಾ ಚೌಕ್‌ನಲ್ಲಿ ಜೆಎಂಎಂ ನೇತೃತ್ವದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತು.